ಹೈದರಾಬಾದ್:ದೇಶದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡದೇ ಕೋವಿಡ್ ವಿರುದ್ಧದ ಹೋರಾಟಕ್ಕಾಗಿ ಹೊಸ ಕಾರ್ಯಸೂಚಿ ಜಾರಿಗೊಳಿಸಿರುವ ಕೇಂದ್ರದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದಿಂದ ರಿಲೀಸ್ ಆಗಿರುವ ಹೊಸ ಕಾರ್ಯಸೂಚಿಯಲ್ಲಿ ರಾಜ್ಯಗಳಿಗೆ ಯಾವುದೇ ಆರ್ಥಿಕ ಸಹಾಯ ಮಾಡಿಲ್ಲ. ರಾಜ್ಯ ಸರ್ಕಾರಗಳೇ ಇದರ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೇಳಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
1952ರ ಸಂವಿಧಾನದ ಪ್ರಕಾರ ರಾಜ್ಯ ಸರ್ಕಾರಗಳು ಸಾರ್ವಜನಿಕ ಸುವ್ಯವಸ್ಥೆ, ಸಾರ್ವಜನಿಕ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ನಿರ್ವಹಿಸುವ ಜವಾಬ್ದಾರಿ ರಾಜ್ಯ ಸರ್ಕಾರದು. ಆದರೆ 2020ರಲ್ಲಿ ಅಮಿತ್ ಶಾ ಚುನಾಯಿತ ರಾಜ್ಯ ಸರ್ಕಾರಗಳಿಗೆ ಆದೇಶ ನೀಡುತ್ತಿದ್ದಾರೆ. ಅವರಿಗೆ ಈ ಅಧಿಕಾರ ನೀಡಿದ್ದು ಯಾರು? ಮೂಲಭೂತ ಹಣಕಾಸಿನ ನೆರವು ಇಲ್ಲದೇ ರಾಜ್ಯಗಳಿಗೆ ಈ ಕಾರ್ಯಸೂಚಿ ಪಾಲಿಸಲು ಹೇಳುತ್ತಿರುವುದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಇಲಾಖೆ ದೇಶದಲ್ಲಿ ಮೇ.17ರವರೆಗೆ ಲಾಕ್ಡೌನ್ ಮುಂದುವರಿಕೆ ಮಾಡಿ ಆದೇಶ ಹೊರಹಾಕಿದ್ದು, ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್ ನಿರ್ಮಾಣ ಮಾಡಿ ಕೆಲವೊಂದು ಕಾರ್ಯಸೂಚಿ ನೀಡಿದೆ. ಆದರೆ ದೇಶದ ಆರ್ಥಿಕತೆ ಹಾಗೂ ರಾಜ್ಯಗಳಿಗೆ ಯಾವುದೇ ಆರ್ಥಿಕ ಸಹಾಯ ಮಾಡಿಲ್ಲ ಎಂಬುದು ಅನೇಕ ವಿಪಕ್ಷಗಳ ವಾದವಾಗಿದೆ.