ತಿರುವನಂತಪುರಂ (ಕೇರಳ): ಪೌರತ್ವ (ತಿದ್ದುಪಡಿ) ಕಾಯ್ದೆ ಹಿಂಪಡೆಯಬೇಕೆಂದು ಕೋರಿ ಕೇರಳ ವಿಧಾನಸಭೆ ನಿನ್ನೆ ಅವಿಶ್ವಾಸ ನಿರ್ಣಯ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಯಾವುದೇ ರಾಜ್ಯ ಶಾಸಕಾಂಗಕ್ಕೆ ಪೌರತ್ವಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ರೂಪಿಸುವ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.
'ಪೌರತ್ವ ಬಗ್ಗೆ ರಾಜ್ಯ ವಿಧಾನಸಭೆಗಳಿಗೆ ಕಾನೂನು ರಚಿಸುವ ಅಧಿಕಾರವಿಲ್ಲ'
ದೇಶದ ಯಾವುದೇ ರಾಜ್ಯ ಶಾಸಕಾಂಗಕ್ಕೆ ಪೌರತ್ವಕ್ಕೆ ಸಂಬಂಧಿಸಿದಂತೆ ಕಾನೂನು ರೂಪಿಸುವ ಅಧಿಕಾರವಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಪೌರತ್ವ, ಕೇಂದ್ರ ಪಟ್ಟಿಯಲ್ಲಿರುವ ವಿಷಯವಾಗಿದೆ. ಆದ್ದರಿಂದ, ಪೌರತ್ವಕ್ಕೆ ಸಂಬಂಧಿಸಿದಂತೆ ಕಾನೂನು ರಚಿಸಿ, ಅಂಗೀಕರಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇರುತ್ತದೆ ಎಂದು ರವಿಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಕೇರಳ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಕಾಯ್ದೆಯ ವಿರುದ್ಧ ನಿರ್ಣಯ ಅಂಗೀಕರಿಸುವ ಮೊದಲು ಮಾತನಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್, ಕೇರಳದಲ್ಲಿ ಯಾವುದೇ ಬಂಧನ ಕೇಂದ್ರಗಳ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ನಮ್ಮ ನೆಲಕ್ಕೆ ಗ್ರೀಕರು, ರೋಮನ್ನರು, ಅರಬ್ಬರು ಹೀಗೆ ಎಲ್ಲರೂ ಬಂದಿದ್ದು ರಾಜ್ಯಕ್ಕೆ ಜಾತ್ಯತೀತತೆಯ ಸುದೀರ್ಘ ಇತಿಹಾಸವಿದೆ. ಆರಂಭದಲ್ಲೇ ಕ್ರೈಸ್ತರು ಹಾಗು ಮುಸಲ್ಮಾನರು ರಾಜ್ಯಕ್ಕೆ ಆಗಮಿಸಿದ್ದರು. ಎಲ್ಲರನ್ನೂ ಒಳಗೊಳ್ಳುವ ನಮ್ಮ ಸಂಪ್ರದಾಯವನ್ನು ಉಳಿಸಿಕೊಳ್ಳಲು ವಿಧಾನಸಭೆ ಸಹಕರಿಸಬೇಕಿದೆ ಎಂದು ಮನವಿ ಮಾಡಿದ್ದರು.