ಚೆನ್ನೈ: ಭೂವ್ಯಾಜ್ಯ ಹಿನ್ನೆಲೆಯಲ್ಲಿ ಅನಧಿಕೃತ ಬಂದೂಕಿನಿಂದ ಇಬ್ಬರ ಮೇಲೆ ವ್ಯಕ್ತಿವೋರ್ವ ಗುಂಡು ಹಾರಿಸಿದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಚಿತ್ರಮಂದಿರ ಮಾಲೀಕ ನಟರಾಜನ್ ಎಂಬಾತ ನಡುರಸ್ತೆಯಲ್ಲಿಯೇ ಇಬ್ಬರ ಮೇಲೆ ಗುಂಡು ಹಾರಿಸಿದ್ದ. ಘಟನೆಯಲ್ಲಿ ಸುಬ್ರಮಣಿ ಎಂಬಾತ ಸಾವನಪ್ಪಿದ್ದಾನೆ.
ಇಲ್ಲಿನ ಪಳನಿ ಗ್ರಾಮದ ರೈತ ಇಲಂಗೋವನ್ ಜೊತೆ ಭೂವ್ಯಾಜ್ಯ ಹೊಂದಿದ್ದ ನಟರಾಜನ್, ರಸ್ತೆಯಲ್ಲಿಯೇ ಕಾದಾಟಕ್ಕೆ ಇಳಿದಿದ್ದಾನೆ. ಈ ವೇಳೆ ಇಲಂಗೋವನ್ ಹಾಗೂ ಆತನ ಸಂಬಂಧಿಗಳಾದ ಸುಬ್ರಮಣಿ, ಪಳನಿಸ್ವಾಮಿ ತಮ್ಮ ಜಾಗದಲ್ಲಿನ ಬೇಲಿ ಕೆಲಸ ಕುರಿತು ವಿಚಾರಿಸಲು ಬಂದಾಗ ನಟರಾಜನ್ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ.
ಕೃತ್ಯಕ್ಕೆ ಬಳಸಲಾದ ಪಿಸ್ತೂಲ್ ರಸ್ತೆಯಲ್ಲಿ ಇಬ್ಬರ ನಡುವೆ ಗಲಾಟೆ ನಡೆದು, ವಾಗ್ವಾದ ತೀವ್ರ ಸ್ವರೂಪ ಪಡೆದು ನಟರಾಜ್ ಗುಂಡು ಹಾರಿಸಿದ್ದಾನೆ. ಈ ವೇಳೆ ಸಂಬಂಧಿ ಪಳನಿಸ್ವಾಮಿಗೆ ಗುಂಡು ತಗುಲಿ ಗಾಯವಾಗಿದ್ದು, ಬಳಿಕ ಇನ್ನೊಂದು ಗುಂಡು ಸುಬ್ರಮಣಿಗೂ ತಗುಲಿ ನೆಲಕ್ಕುರುಳಿದ್ದಾನೆ.
ಘಟನೆ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿದ್ದು, ನಟರಾಜನ್ ಅನ್ನು ಬಂಧಿಸಿದ್ದಾರೆ. ಅಲ್ಲದೆ ಗಾಯಗೊಂಡಿದ್ದ ಇಬ್ಬರನ್ನೂ ಎರಡು ಪ್ರತ್ಯೇಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುಂಡೇಟಿನಿಂದ ಸೊಂಟಕ್ಕೆ ಗಾಯವಾಗಿದ್ದ ಪಳನಿಸ್ವಾಮಿ ಪ್ರಾಣಾಪಾಯದಿಂದ ಪಾರಾಗಿದ್ದರೆ, ಮಧುರೈ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುಬ್ರಮಣಿ ಸಾವನ್ನಪ್ಪಿದ್ದಾನೆ.