ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಒಂದು ದೇಶ, ಒಂದು ಚುನಾವಣೆ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಅದಕ್ಕಾಗಿ ಸಮಿತಿ ರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿ ನಡೆದ ಮೋದಿ ನೇತೃತ್ವದ ಮಹತ್ವದ ಸಭೆಯಲ್ಲಿ ಬಹುತೇಕ ವಿಪಕ್ಷಗಳು ಸಭೆಯಲ್ಲಿ ಭಾಗಿಯಾಗಿದ್ದಿಲ್ಲ. ಒಡಿಶಾ ಸಿಎಂ ನವೀನ್ ಪಟ್ನಾಯಕ್, ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಹಾಗೂ ಜಮ್ಮು-ಕಾಶ್ಮೀರ್ ಮಾಜಿ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಸಭೆಯಲ್ಲಿ ಭಾಗಿಯಾಗಿದ್ದರು. ಆದರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಬಿಎಸ್ಪಿ ನಾಯಕಿ ಮಾಯಾವತಿ, ಎಸ್ಪಿ ಮುಖಂಡ ಅಖಿಲೇಶ್ ಯಾದವ್, ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಸೇರಿದಂತೆ 14 ಪಕ್ಷದ ಮುಖ್ಯಸ್ಥರು ಗೈರು ಹಾಜರಾಗಿದ್ದರು.
ಒನ್ ನೇಷನ್,ಒನ್ ಎಲೆಕ್ಷನ್ಗೆ ಸಮಿತಿ ರಚನೆ ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದು, ಭಾಗಿಯಾಗಿದ್ದ ಎಲ್ಲ ಪಕ್ಷಗಳು ಇದಕ್ಕೆ ಸಕಾರಾತ್ಮವಾಗಿ ಸ್ಪಂದನೆ ನೀಡಿವೆ. ಆದರೆ, ಸಿಪಿಐ(ಎಂ) ಮಾತ್ರ ಬೇರೆ ಅಂಶಗಳ ಬಗ್ಗೆ ಪ್ರಸ್ತಾಪ ಮಾಡಿದೆ ಎಂದು ರಕ್ಷಣಾ ಸಚಿವರು ಮಾಹಿತಿ ನೀಡಿದ್ದಾರೆ.
ಒನ್ ನೇಷನ್, ಒನ್ ಎಲೆಕ್ಷನ್ಗಾಗಿ ಸಮಿತಿ ರಚನೆ ಮಾಡಲಿದ್ದು, ಅದರಲ್ಲಿ ಚುನಾವಣಾ ಆಯೋಗದ ಪ್ರತಿನಿಧಿಗಳಿಗೂ ಅವಕಾಶ ನೀಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ನಾವು 40 ಪಕ್ಷಗಳಿಗೆ ಸಭೆಯಲ್ಲಿ ಭಾಗಿಯಾಗಲು ಆಹ್ವಾನ ನೀಡಿದ್ದೆವು. ಸಭೆಯಲ್ಲಿ 21 ಪಕ್ಷಗಳು ಭಾಗಿಯಾಗಿದ್ದು, ಮೂರು ಪಕ್ಷಗಳು ಭಾಗಿಯಾಗದಿರಲು ಕಾರಣ ನೀಡಿ, ಪತ್ರ ಬರೆದಿವೆ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸರ್ವಪಕ್ಷಗಳ ಸಭೆಯಲ್ಲಿ ಭಾಗಿಯಾಗುವಂತೆ ಎಲ್ಲ ಪಕ್ಷಗಳನ್ನ ಸಂಪರ್ಕಿಸಿ ಆಹ್ವಾನ ನೀಡಿದ್ದರು. ಇನ್ನು ಒನ್ ನೇಷನ್ ಒನ್ ಎಲೆಕ್ಷನ್ಗೆ ಸಿಪಿಎಂ ವಿರೋಧ ವ್ಯಕ್ತಪಡಿಸಿದ್ದಾಗಿ ತಿಳಿದು ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಅತಿದೊಡ್ಡ ಚರ್ಚೆ ಅಗತ್ಯವಾಗಿದೆ ಎಂದು ಆ ಪಕ್ಷ ಪ್ರತಿಪಾದಿಸಿದೆ.