ನವದೆಹಲಿ: 'ಆಯುಷ್ಮಾನ್ ಭಾರತ್' ಯೋಜನೆಯ ಲಾಭ ಪಡೆದವರ ಸಂಖ್ಯೆ ಒಂದು ಕೋಟಿಯ ಗಡಿ ದಾಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೆಪ್ಟೆಂಬರ್ 2018ರಲ್ಲಿ ಪ್ರಧಾನಿ ಮೋದಿ ಜನ ಆರೋಗ್ಯ ಯೋಜನೆ-ಆಯುಷ್ಮಾನ್ ಭಾರತವನ್ನು ಪ್ರಾರಂಭಿಸಿದ್ದರು. ಈ ಯೋಜನೆಯು ಹಲವರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಇದನ್ನು ವಿಶ್ವದ ಅತಿದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ಯೋಜನೆ ಎಂದು ಕರೆಯಲಾಗುತ್ತದೆ.
"ಆಯುಷ್ಮಾನ್ ಭಾರತ್ ಫಲಾನುಭವಿಗಳ ಸಂಖ್ಯೆ 1 ಕೋಟಿಯನ್ನು ದಾಟಿದೆ ಎಂಬುದು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆ ಪಡುವ ವಿಷಯವಾಗಿದೆ. ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಈ ಯೋಜನೆ ಅನೇಕರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ನಲ್ಲಿ ಬರೆದಿದ್ದಾರೆ.
ಈ ಯೋಜನೆಯ ಫಲಾನುಭವಿಗಳು ಮತ್ತು ಅವರ ಕುಟುಂಬಗಳನ್ನು ಅಭಿನಂದಿಸಿದ ಪ್ರಧಾನಿ ಮತ್ತು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಮತ್ತು ಆಯುಷ್ಮಾನ್ ಭಾರತ್‌ಗೆ ಸಂಬಂಧಿಸಿದ ಎಲ್ಲರ ಕಾರ್ಯವನ್ನು ಶ್ಲಾಘಿಸಿದರು.
"ಫಲಾನುಭವಿಗಳು ತಾವು ನೋಂದಾಯಿಸಿದ ಸ್ಥಳದಲ್ಲಿ ಮಾತ್ರವಲ್ಲದೆ ಭಾರತದ ಇತರ ಭಾಗಗಳಲ್ಲಿಯೂ ಉತ್ತಮ ಗುಣಮಟ್ಟದ ವೈದ್ಯಕೀಯ ಆರೈಕೆ ಪಡೆಯಬಹುದು. ಇದು ಮನೆಯಿಂದ ದೂರ ಇರುವವರಿಗೆ ಸಹಾಯ ಮಾಡುತ್ತದೆ" ಎಂದು ಮೋದಿ ಹೇಳಿದರು.