ಶ್ರೀನಗರ:ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿರುವುದರಿಂದ ಕೇಂದ್ರಾಡಳಿತ ಪ್ರದೇಶದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೇವಲ 'ಅಶ್ಲೀಲ ಚಿತ್ರ'ಗಳನ್ನ ನೋಡಲು ಜಮ್ಮು ಮತ್ತು ಕಾಶ್ಮೀರದ ಜನರು ಇಂಟರ್ನೆಟ್ ಬಳಸುತ್ತಿದ್ದರು ಎಂದು ಹೇಳಿಕೆ ನೀಡುವ ಮೂಲಕ 370 ವಿಧಿಯ ಬಳಿಕ ಕಣಿವೆ ರಾಜ್ಯದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿರುವುದಕ್ಕೆ ನೀತಿ ಆಯೋಗದ ಸದಸ್ಯ ವಿ.ಕೆ.ಸಾರಸ್ವತ್ ಸ್ಪಷ್ಟನೆ ನೀಡಿದ್ದಾರೆ.
ಗುಜರಾತ್ನ ಗಾಂಧಿ ನಗರದಲ್ಲಿರುವ ಧೀರೂಬಾಯಿ ಅಂಬಾನಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಂಸ್ಥೆಯ ಘಟಿಕೋತ್ಸವದ ಸಂದರ್ಭ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ವಿ.ಕೆ.ಸಾರಸ್ವತ್, ಕಾಶ್ಮೀರದಲ್ಲಿ ಇಂಟರ್ನೆಟ್ ಇಲ್ಲ ಎಂದರೆ ಏನಾಗುತ್ತೆ? ಇಂಟರ್ನೆಟ್ ಅಲ್ಲಿ ನೀವು ಏನು ನೋಡುತ್ತೀರಾ? 'ಅಶ್ಲೀಲ ಚಿತ್ರ'ಗಳ ಹೊರತಾಗಿ ಬೇರೇನೂ ನೋಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು.
ಸಾರಸ್ವತ್ ಅವರ ಹೇಳಿಕೆಯನ್ನು ಖಂಡಿಸಿರುವ ಕಾಶ್ಮೀರದ ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿ (ಕೆಸಿಸಿಐ), ತಕ್ಷಣವೇ ಸಾರಸ್ವತ್ರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಿದೆ.
ಸಾರಸ್ವತ್, ಕಾಶ್ಮೀರದ ಜನರ ವಿರುದ್ಧ ವಿಷವನ್ನು ಪಸರಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರ ಬಗ್ಗೆ ಈ ರೀತಿ ಮಾತನಾಡಲು ಅವರಿಗೆ ಯಾರೂ ಅಧಿಕಾರ ನೀಡಿಲ್ಲ. ಇಂಟರ್ನೆಟ್ ಸ್ಥಗಿತದಿಂದಾಗಿ ಕಣಿವೆ ರಾಜ್ಯಕ್ಕೆ ಎಷ್ಟು ಸಮಸ್ಯೆಯಾಗಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ. ಕಳೆದ ಆರು ತಿಂಗಳಲ್ಲಿ ಸುಮಾರು 18 ಸಾವಿರ ಕೋಟಿವರೆಗೂ ವ್ಯಾಪಾರ ವಲಯದಲ್ಲಿ ನಷ್ಟವಾಗಿದೆ. ಆರ್ಥಿಕತೆಯ ಮೇಲೆ ಇದು ಎಷ್ಟು ಅಡ್ಡ ಪರಿಣಾಮ ಬೀರಿದೆ ಎನ್ನುವುದು ನಮ್ಮ ಮಂಡಳಿಗೆ ಗೊತ್ತು. ಸಾರಸ್ವತ್ ಹೀಗೆ ಹೇಳಿರುವುದು ಅವರ ಮನಸ್ಸಿನ ಆಲೋಚನಾ ಸಾಮರ್ಥ್ಯವನ್ನು ತೋರಿಸುತ್ತದೆ. ಇಂತವರು ನೀತಿ ಆಯೋಗದಲ್ಲಿ ಇರುವುದರಿಂದ ಜಮ್ಮು-ಕಾಶ್ಮೀರಕ್ಕೆ ಯಾವ ನ್ಯಾಯವೂ ಸಿಗುತ್ತಿಲ್ಲ ಎಂದು ಕೆಸಿಸಿಐ ಅಧ್ಯಕ್ಷ ಶೇಖ್ ಆಶಿಕ್ ಹೇಳಿದ್ದಾರೆ.
ಕಾಶ್ಮೀರದ ವ್ಯಾಪಾರ ವಲಯದಲ್ಲಿ ಉಂಟಾದ ನಷ್ಟದ ಕುರಿತ ವರದಿಯನ್ನು ಲೆಫ್ಟಿನೆಂಟ್ ಗವರ್ನರ್ ಜಿ ಸಿ ಮುರ್ಮು ಹಾಗೂ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ಗೆ ನೀಡಿದ್ದು, ಈ ಕೂಡಲೇ ಸಾರಸ್ವತ್ರನ್ನು ಅಮಾನತುಗೊಳಿಸಲು ಆಗ್ರಹಿಸಲಾಗಿದೆ ಎಂದು ಆಶಿಕ್ ತಿಳಿಸಿದ್ದಾರೆ.