ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದು, ಇದರ ನಡುವೆ ಲಾಕ್ಡೌನ್ ಹಿಂಪಡೆದುಕೊಳ್ಳಲಾಗಿದೆ. ಸದ್ಯ ಭಾರತದಲ್ಲಿ 3.0 ಅನ್ಲಾಕ್ ಜಾರಿಯಲ್ಲಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಕೆಲವೊಂದು ರಾಜ್ಯಗಳಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಅಂತಾರಾಜ್ಯ ಸಂಚಾರ ನಿರ್ಬಂಧ ಮಾಡಿ, ಆದೇಶ ಹೊರಹಾಕುತ್ತಿವೆ. ಇದರಿಂದ ಗರಂ ಆಗಿರುವ ಕೇಂದ್ರ ಸರ್ಕಾರ ಸದ್ಯ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದೆ.
ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಬುಲ್ಲಾ ಪತ್ರ ಬರೆದಿದ್ದು, ಅಂತಾರಾಜ್ಯ ಸಂಚಾರಕ್ಕಾಗಿ ಯಾವುದೇ ನಿರ್ಬಂಧ ಹೇರದಂತೆ ಸೂಚನೆ ನೀಡಿದೆ. ವ್ಯಕ್ತಿಗಳು ಅಥವಾ ಸರಬರಾಜು ವಾಹನ ಸಂಚಾರಕ್ಕೆ ಇದು ಅನ್ವಯವಾಗಲಿದೆ ಎಂದೂ ತಿಳಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಇದಕ್ಕಾಗಿ ಗೈಡ್ಲೈನ್ ಹೊರಡಿಸಿದ್ದು, ನಿಮ್ಮ ನಿಮ್ಮ ಪ್ರಕಾರ ಮಾರ್ಗಸೂಚಿ ತಯಾರಿಸಿಕೊಳ್ಳಬೇಡಿ ಎಂದು ವಾರ್ನ್ ಮಾಡಿದೆ.
5 ಪುಟಗಳನ್ನೊಳಗೊಂಡ ಪತ್ರದಲ್ಲಿ ಇದೀಗ ಅಂತಾರಾಜ್ಯ ಸಂಚಾರಕ್ಕಾಗಿ ಇ-ಪರವಾನಗಿ ಪತ್ರದ ಅವಶ್ಯಕತೆ ಇಲ್ಲ ಎಂದಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅಂತಾರಾಜ್ಯ ಸಂಚಾರಕ್ಕಾಗಿ ಹೇರಿಕೆ ಮಾಡಿರುವ ನಿರ್ಬಂಧ ತೆರವುಗೊಳಿಸುವಂತೆ ತಿಳಿಸಿದೆ.
ಆರಂಭದಲ್ಲಿ ಸರಿಸುಮಾರು 2 ತಿಂಗಳ ಕಾಲ ಅಂತಾರಾಜ್ಯ ಸಂಚಾರ ಸಂಪೂರ್ಣವಾಗಿ ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಹಾಕಿತ್ತು. ಈ ವೇಳೆ, ಇ-ಪರವಾನಗಿ ಇರುವ ವಾಹನಗಳಿಗೆ ಮಾತ್ರ ಸಂಚಾರಕ್ಕಾಗಿ ಅನುಮತಿ ನೀಡಿತ್ತು. ಆದರೆ, ತದನಂತರ ಅದರ ಮೇಲಿನ ನಿರ್ಬಂಧ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ.