ಚಂಡೀಗಢ(ಪಂಜಾಬ್):ದೇಶಾದ್ಯಂತ ಕೊರೊನಾ ಸೋಂಕು ಹರಡುವಿಕೆ ಕೊಂಚ ತಹಬದಿಗೆ ಬಂದ ಕಾರಣ ಹಾಗು ಆರ್ಥಿಕಾಭಿವೃದ್ಧಿಯ ಹಿತದೃಷ್ಟಿಯಿಂದ ನಿಷೇಧಾಜ್ಞೆ, ಲಾಕ್ಡೌನ್ ಅನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಆದರೆ ಪಂಜಾಬ್ ಸರ್ಕಾರ ಮಾತ್ರ ಮತ್ತೊಮ್ಮೆ ರಾಜ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಿದೆ.
ಪ್ರತಿದಿನ ಸಂಜೆ 7ಗಂಟೆಯಿಂದ ಬೆಳಗ್ಗೆ 5ಗಂಟೆವರೆಗೆ ರಾತ್ರಿ ಕರ್ಫ್ಯೂ ವಿಧಿಸಿ, ಪಂಜಾಬ್ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ನಾಳೆಯಿಂದಲೇ ಈ ನಿಯಮ ಜಾರಿಗೆ ಬರಲಿದೆ. ಇದರ ಜತೆಗೆ 167 ನಗರಗಳಲ್ಲಿ ಪ್ರತಿ ಭಾನುವಾರ ಸಂಪೂರ್ಣ ಲಾಕ್ಡೌನ್ ಇರಲಿದೆ.
ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ಕಡಿತಗೊಳಿಸಲಾಗಿದ್ದು, ರಾಜ್ಯದಲ್ಲಿ ಶೇ.50ರಷ್ಟು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಅಮೃತಸರ, ಲೂಧಿಯಾನಾ, ಎಸ್ಎಎಸ್ ನಗರ, ಪಟಿಯಾಲ ಹಾಗೂ ಜಲಂಧರ್ನಲ್ಲಿ ಹೆಚ್ಚಿನ ಸೋಂಕು ಕಾಣಿಸಿಕೊಳ್ಳುತ್ತಿರುವ ಕಾರಣ ಲಾಕ್ಡೌನ್ ಜಾರಿಗೊಳಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಕೊರೊನಾ ವೈರಸ್ ಸೋಂಕು ವಿರುದ್ಧ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಹೀಗಾಗಿ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಪಂಜಾಬ್‌ನಲ್ಲಿ ಸದ್ಯ 36 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳಿವೆ.