ನವದೆಹಲಿ:ಬೆಂಗಳೂರಿನ ಪ್ರಮುಖ ಕೆರೆಗಳಾಗಿರುವ ಬೆಳ್ಳಂದೂರು, ವರ್ತೂರು ಹಾಗೂ ಅಗರ ಕೆರೆಗಳ ಸಂರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದೆ.
ಪ್ರಮುಖ ಕೆರೆಗಳ ರಕ್ಷಣೆ ಹಾಗೂ ಅವುಗಳ ಪುನರ್ ಅಭಿವೃದ್ಧಿಗಾಗಿ ಜತೆಗೆ ಕೊಳಚೆ ನೀರಿನ ಸಂಸ್ಕರಣಾ ಘಟಕಗಳ ನಿರ್ಮಾಣ ಕಾರ್ಯವನ್ನ ಮುಂದಿನ ವರ್ಷ ಸೆಪ್ಟೆಂಬರ್ 30ರೊಳಗಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದೆ.
ಬೆಂಗಳೂರಿನ ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಮಾಲಿನ್ಯದ ವಿಚಾರ ಇತ್ತೀಚೆಗೆ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಹೀಗಾಗಿ ಈ ಕೆರೆಗಳನ್ನು ಅಭಿವೃದ್ಧಿಪಡಿಸಲು ಕೋರಿ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿಯನ್ನು ಇಂದು ಪರಿಶೀಲನೆಗೊಳಪಡಿಸಿದ ಹಸಿರು ನ್ಯಾಯಪೀಠ ಈ ಸೂಚನೆ ನೀಡಿದೆ.
ಪ್ರಮುಖ ಕೆರೆಗಳ ಪುನಶ್ಚೇತನ ಕುರಿತು ರಾಜ್ಯ ಸರಕಾರ ಅಸಡ್ಡೆ ತೋರಿದ್ದನ್ನು ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ (ಎನ್.ಜಿ.ಟಿ) ನಿರ್ದೇಶನಗಳನ್ನು ಪಾಲಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಈ ಹಿಂದೆ ನ್ಯಾ. ಸಂತೋಷ ಹೆಗ್ಡೆ ಅವರು ವರದಿ ಸಹ ನೀಡಿದ್ದರು. ಈ ಆದೇಶ ಪಾಲನೆ ಮಾಡದೇ ಇರುವುದಕ್ಕಾಗಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು.