ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆತ್ಮಹತ್ಯೆಯೋ, ಕೊಲೆಯೋ ಎಂಬ ಅನುಮಾನಗಳ ನಡುವೆ ಕೆಲವೊಂದು ಗೊಂದಲಗಳಿಗೆ ತೆರೆಬಿದ್ದಿದೆ.
ಸುಶಾಂತ್ ಸಿಂಗ್ ರಜಪೂತ್ ಮೃತಪಡುವ ಒಂದು ದಿನದ ಮೊದಲು ಅಂದ್ರೆ ಜೂನ್ 13ರಂದು ಅವರ ಮನೆಯಲ್ಲಿ ಯಾವುದೇ ಸಮಾರಂಭ ನಡೆದಿಲ್ಲ ಎಂದು ಮುಂಬೈ ಪೊಲೀಸ್ ಕಮೀಷನರ್ ಪರಮ್ ಬೀರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಇದಾದ ಒಂದು ದಿನದ ನಂತರ ಸುಶಾಂತ್ ದೇಹ ಆತ್ಮಹತ್ಯೆ ಮಾಡಿಕೊಂಡ ಮಾದರಿಯಲ್ಲಿ ಅವರ ಕೋಣೆಯಲ್ಲಿ ಪತ್ತೆಯಾಗಿತ್ತು.
ಮುಂಬೈ ಪೊಲೀಸರು ಈ ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು, ಸುಶಾಂತ್ರ ಕುಟುಂಬಸ್ಥರು, ಸ್ನೇಹಿತರು, ವೈದ್ಯರು ಮುಂತಾದವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಇದರ ಜೊತೆಗೆ ಸುಶಾಂತ್ರ ಬ್ಯಾಂಕ್ ವಹಿವಾಟಿನ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸುಶಾಂತ್ ಸಾವು ಪ್ರಕರಣದಲ್ಲಿ ಮಹಾರಾಷ್ಟ್ರದ ಪ್ರಮುಖ ರಾಜಕೀಯ ವ್ಯಕ್ತಿಯ ಹೆಸರೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಮುಂಬೈ ಪೊಲೀಸ್ ಕಮೀಷನರ್ ಪರಮ್ ಬೀರ್ ಸಿಂಗ್ ಹೇಳಿದ್ದಾರೆ.