ವಿದಿಷಾ (ಮಧ್ಯಪ್ರದೇಶ): ಸೆಲ್ಫಿ ತೆಗೆಯಲು ಹೋಗಿ 33 ವರ್ಷದ ಮಹಿಳೆಯೋರ್ವರು ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಮೃತರನ್ನು ವಿದಿಷಾ ಪಟ್ಟಣದ ಕರರಿಯಾ ಪ್ರದೇಶದ ನಿವಾಸಿ 'ಹಿಮಾನಿ ಮಿಶ್ರಾ' ಎಂದು ಗುರುತಿಸಲಾಗಿದೆ. ಇವರು ಸೆಲ್ಫಿ ಕ್ಲಿಕ್ ಮಾಡುವ ವೇಳೆ ಹಲಾಲಿ ಜಲಪಾತಕ್ಕೆ ಜಾರಿ ಬಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಮ್ ಗಾರ್ಡ್ ಕಮಾಂಡೆಂಟ್ ಎಸ್.ಡಿ.ಪಿಳ್ಳೈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಕ್ಷಣಾ ತಂಡ ತೆರಳಿದ್ದು, ಸುಮಾರು 16 ಗಂಟೆಯ ಬಳಿಕ ಆಕೆಯ ಶವವನ್ನು ಹೊರ ತೆಗೆಯಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೆತ್ತಿಕೊಂಡಿದ್ದಾರೆ.
ಹೋಮ್ ಗಾರ್ಡ್ ಕಮಾಂಡೆಂಟ್ ಎಸ್.ಡಿ. ಪಿಳ್ಳೈ ಮಾತನಾಡಿ, ಭೋಪಾಲ್ನಿಂದ ಕುಟುಂಬವೊಂದು 'ಹಲಾಲಿ ಡ್ಯಾಂ' ವೀಕ್ಷಿಸುವ ಸಲುವಾಗಿ ಬಂದಿತ್ತು. ಮಹಿಳೆ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ನೀರು ಪಾಲಾದರು. ಸುಮಾರು 16 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಮಹಿಳೆಯ ಮೃತದೇಹವನ್ನು ಪತ್ತೆ ಹಚ್ಚಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.