ಹೈದರಾಬಾದ್:ಚಂದ್ರನು ಸೂರ್ಯನ ಮೇಲೆ ಹಾದುಹೋಗುವ ರೋಚಕ ದೃಶ್ಯವನ್ನು ನಾಸಾ ಟ್ವಿಟರ್ ಮೂಲಕ ಬಿಡುಗಡೆ ಮಾಡಿದೆ. ಇದನ್ನು ಅಕ್ಟೋಬರ್ 16 ರಂದು ನಾಸಾದ ಉಪಗ್ರಹ ಮತ್ತು ಬಾಹ್ಯಾಕಾಶ ನೌಕೆ ಸೆರೆಹಿಡಿದಿದೆ.
ಬಾನಂಗಳದಿ ಸೂರ್ಯನೆದುರು ಚಂದ್ರನ ಪ್ರಯಾಣ: ರೋಚಕ ದೃಶ್ಯ ಸೆರೆ ಹಿಡಿದ ನಾಸಾ - ಬಾನಂಗಳದಲ್ಲಿ ಸೂರ್ಯ ಚಂದ್ರರ ರೋಚಕ ದೃಶ್ಯ ಸೆರೆ ಹಿಡಿದ ನಾಸಾ
ಬಾನಂಗಳದಲ್ಲಿ ನಡೆದ ರೋಚಕ ವಿದ್ಯಮಾನವೊಂದನ್ನು ನಾಸಾ ಸೆರೆಹಿಡಿದಿದೆ. ಚಂದ್ರನು ಸೂರ್ಯನ ಮೇಲ್ಮೈ ಬಳಿ ಹಾದು ಹೋಗುವ ಕುತೂಹಲಕಾರಿ ದೃಶ್ಯ ಇಲ್ಲಿದೆ ನೋಡಿ.
ಬಂಗಾರದ ಉಂಡೆಯಂತೆ ಹೊಳೆಯುತ್ತಿರುವ ಸೂರ್ಯನ ಎದುರು ಚಂದ್ರ ಹಾದು ಹೋಗುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಈ ಘಟನೆಯು ಮಧ್ಯಾಹ್ನ 3:05 ರಿಂದ ಮಧ್ಯಾಹ್ನ 3:53 ರ ನಡುವೆ ಸುಮಾರು 50 ನಿಮಿಷಗಳ ಕಾಲ ನಡೆದಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ. ಒಂದು ಹಂತದಲ್ಲಿ ಚಂದ್ರನು ಸೂರ್ಯನನ್ನು ಸುಮಾರು ಶೇ 44 ನಷ್ಟು ಆವರಿಸಿ ಬಳಿಕ ಸರಿದು ಹೋಗಿದ್ದಾನೆ ಎಂದು ನಾಸಾ ಹೇಳಿದೆ. ಈ ವಿಸ್ಮಯಕಾರಿ ದೃಶ್ಯವನ್ನು ಅಕ್ಟೋಬರ್ 16 ರಂದು ಸೌರ ಡೈನಾಮಿಕ್ಸ್ ಅಬ್ಸರ್ವೇಟರಿ (ಎಸ್‌ಡಿಒ) ಸೂರ್ಯನನ್ನು ವೀಕ್ಷಿಸುತ್ತಿದ್ದಾಗ ಸೆರೆಹಿಡಿದಿದೆ.
ಎಸ್‌ಡಿಒ ಎಂಬ ಬಾಹ್ಯಾಕಾಶ ನೌಕೆ ಈ ಚಿತ್ರಗಳನ್ನು ತೀವ್ರ ನೇರಳಾತೀತ ಬೆಳಕಿನ ತರಂಗಾಂತರದಲ್ಲಿ ಸೆರೆಹಿಡಿದಿದೆ. ಈ ರೀತಿಯ ಬೆಳಕು ಮಾನವನ ಕಣ್ಣುಗಳಿಗೆ ಅಗೋಚರವಾಗಿರುತ್ತದೆ ಮತ್ತು ಇಲ್ಲಿ ಸೂರ್ಯ ಬಂಗಾರದ ಬಣ್ಣದಲ್ಲಿದ್ದಾನೆ ಎಂದು ನಾಸಾ ತಿಳಿಸಿದೆ.