ಅಲ್ವಾರ್(ರಾಜಸ್ಥಾನ): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾರ್ವಜನಿಕವಾಗಿ ದೇಶದ ತಾಯಂದಿರ ಕ್ಷಮೆ ಕೇಳಬೇಕು ಎಂದು ರಾಜಸ್ಥಾನ ಸಚಿವೆ ಮಮತಾ ಭೂಪೇಶ್ ಆಗ್ರಹಿಸಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ದೇಶದ ತಾಯಂದಿರ ಕ್ಷಮೆ ಕೋರಬೇಕು: ಮಮತಾ ಭೂಪೇಶ್ - ಯೋಗಿ ಆದಿತ್ಯನಾಥ್ ದೇಶದ ತಾಯಂದಿರ ಕ್ಷಮೆ ಕೋರಬೇಕು
ಹಥ್ರಾಸ್ ಸಂತ್ರಸ್ತೆಯ ದೇಹವನ್ನು ಆತುರದಿಂದ ಏಕೆ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಪ್ರಶ್ನಿಸಿರುವ ರಾಜಸ್ಥಾನ ಸಚಿವೆ ಮಮತಾ ಭೂಪೇಶ್ ಅವರು ಉತ್ತರ ಪ್ರದೇಶ ಸಿಎಂ ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.
ಹಥ್ರಾಸ್ ಘಟನೆ ಕುರಿತು ಮಾತನಾಡಿದ ಅವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಸಾರ್ವಜನಿಕ ವೇದಿಕೆ ಮೂಲಕ ದೇಶದ ತಾಯಂದಿರ ಕ್ಷಮೆಯಾಚಿಸಬೇಕು ಎಂದಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹಥ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೋಗುತ್ತಿದ್ದಾಗ ಅವರನ್ನು ದಾರಿಯಲ್ಲಿ ನಿಲ್ಲಿಸಲಾಯಿತು. ಆದರೆ ಅಂತಾ ಘಟನೆ ಇಲ್ಲಿ ನಡೆದಿದ್ದರೆ ಯಾರಾದರೂ ರಾಜಸ್ಥಾನಕ್ಕೆ ಬರಲು ಬಯಸಿದ್ದರೆ ಬರಬಹುದು ಎಂದು ನಮ್ಮ ಮುಖ್ಯಮಂತ್ರಿ ಗೆಹ್ಲೋಟ್ ಹೇಳುತ್ತಿದ್ದರು. ರಾಜಸ್ಥಾನದಲ್ಲಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಯಾವುದೇ ವ್ಯಕ್ತಿಯನ್ನು ತಡೆಯಲಾಗುವುದಿಲ್ಲ. ಸರ್ಕಾರಕ್ಕೂ ಆ ವ್ಯಕ್ತಿಯ ಬಗ್ಗೆ ಸಹಾನುಭೂತಿ ಇದೆ ಎಂದಿದ್ದಾರೆ.
ಹಥ್ರಾಸ್ ಘಟನೆಯನ್ನು ರಾಜಸ್ಥಾನದ ಅಲ್ವಾರ್‌ನ ತನಗಾಜಿಯಲ್ಲಿ ನಡೆದ ಘಟನೆಗೆ ಹೋಲಿಸಿದ್ದಾರೆ. ಅಲ್ವಾರ್‌ನ ತನಗಾಜಿಯಲ್ಲಿ, ಮಹಿಳೆಯೊಬ್ಬಳು ತನ್ನ ಗಂಡನೊಂದಿಗೆ ಹೋಗುವ ವೇಳೆ ಸಾಮೂಹಿಕ ಅತ್ಯಾಚಾರ ನಡೆಸಿ ವಿಡಿಯೋವನ್ನು ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಈ ಘಟನೆ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿತ್ತು. ಆದ್ದರಿಂದ ಇಂದು ಸಂತ್ರಸ್ತೆ, ಪೊಲೀಸ್ ಕಾನ್ಸ್ಟೇಬಲ್ ಆಗಿ ತನ್ನ ಜೀವನ ಸಾಗಿಸುತ್ತಿದ್ದಾಳೆ. ಆದರೆ ಹಥ್ರಾಸ್ ಸಂತ್ರಸ್ತೆಯ ಮೃತದೇಹಕ್ಕೆ ಆತುರದಿಂದ ಏಕೆ ಬೆಂಕಿ ಇಡಲಾಯಿತು. ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಮಾಧ್ಯಮಗಳಿಗೆ ಏಕೆ ಅವಕಾಶ ನೀಡಲಿಲ್ಲ ಎಂದು ಸಚಿವೆ ಮಮತಾ ಭೂಪೇಶ್ ಅವರು ಉತ್ತರ ಪ್ರದೇಶದ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.