ಕೋಲ್ಕತಾ:ದೇಶಾದ್ಯಂತ ನಡೆಯುತ್ತಿರುವ ವೈದ್ಯರ ಪ್ರತಿಭಟನೆಯ ಮೂಲವಾಗಿರುವ ಪಶ್ಚಿಮ ಬಂಗಾಳದಲ್ಲಿ ಬಿಸಿ ತುಸು ಜೋರಾಗಿಯೇ ಇದೆ. ಸಿಎಂ ಮಮತಾ ಬ್ಯಾನರ್ಜಿ ಜೊತೆಗೆ ಮಾತುಕತೆಗೆ ಪಟ್ಟು ಹಿಡಿದಿದ್ದ ವೈದ್ಯರಿಗೆ ದೀದಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎನ್ನುವ ಪ್ರಮುಖ ಬೇಡಿಕೆಯನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಸದ್ಯ ಮೀಟಿಂಗ್ನಲ್ಲಿ ಭದ್ರತೆಯ ಕುರಿತಾಗಿ ದೀದಿ ಹತ್ತು ಅಂಶಗಳ ಸಲಹೆ ನೀಡಿದ್ದಾರೆ.
ಮೀಟಿಂಗ್ನಲ್ಲಿ ಪ್ರತಿನಿಧಿಯಾಗಿ 24 ವೈದ್ಯರು ಭಾಗವಹಿಸಿದ್ದರು. ಪ್ರತಿಯೊಂದು ಆಸ್ಪತ್ರೆಯಲ್ಲೂ ಹಿರಿಯ ಪೊಲೀಸ್ ಅಧಿಕಾರಿಯನ್ನು ನೇಮಕ ಮಾಡುವುದು, ಪ್ರತಿಯೊಬ್ಬ ರೋಗಿಗಳ ಸಮರ್ಪಕ ದಾಖಲಾತಿ ಮಾಡುವ ಬಗ್ಗೆ ಮಮತಾ ಬ್ಯಾನರ್ಜಿ ಸಭೆಯಲ್ಲಿ ಸಲಹೆ ನೀಡಿದ್ದಾರೆ.
ಜೂನ್ 10ರಂದು ಕೋಲ್ಕತಾದ ಎನ್‌ಆರ್‌ಎಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಾರ್ಯನಿರತ ಕಿರಿಯ ವೈದ್ಯರೊಬ್ಬರ ಮೇಲೆ ಮೃತ ರೋಗಿಯ ಕುಟುಂಬಸ್ಥರು ದಾಳಿ ನಡೆಸಿದ್ದನ್ನು ಖಂಡಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಮಮತಾ ಬ್ಯಾನರ್ಜಿ, ವೈದ್ಯರನ್ನೇ ಅಪರಾಧಿಗಳಂತೆ ಬಿಂಬಿಸಿದ್ದರು. ಅವರ ವಿರುದ್ಧ ಹೇಳಿಕೆಯನ್ನೂ ನೀಡಿದ್ದರು. ಈ ಪ್ರಕರಣ ವಿಕೋಪಕ್ಕೆ ಹೋಗಿದ್ದು, ವೈದ್ಯರು ಮಮತಾ ಅವರ ಕ್ಷಮಾಪಣೆಗೂ ಪಟ್ಟು ಹಿಡಿದು ಮುಷ್ಕರ ನಡೆಸಿದ್ದರು.