ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಗೈರಾಗಲಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿಗೆ 3 ಪುಟಗಳ ಪತ್ರ ಬರೆದಿರುವ ದೀದಿ, ಈ ನೀತಿ ಆಯೋಗ ಸಭೆಯಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ತಾವು ಸಭೆಗೆ ಹಾಜರಾಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದೀದಿ, ನೀತಿ ಆಯೋಗಕ್ಕಿಂತ ಯೋಜನಾ ಆಯೋಗ ಉತ್ತಮವಾಗಿತ್ತು, ಹೀಗಾಗಿ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳಿಗೆ ನಾನು ಪತ್ರ ಬರೆದಿದ್ದು, ಮತ್ತೆ ಯೋಜನಾ ಆಯೋಗವನ್ನ ಜಾರಿಗೆ ತರುವಂತೆ ಒತ್ತಡ ಹೇರಲು ಕೇಳಿಕೊಂಡಿದ್ದೇನೆ ಎಂದಿದ್ದಾರೆ.
ಇತ್ತ ತೆಲಂಗಾಣದಲ್ಲಿ ನೀರಾವರಿ ಯೋಜನೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿರುವ ಕೆಸಿಆರ್, ನೀತಿ ಆಯೋಗದ ಸಭೆಗೆ ಗೈರಾಗಲಿದ್ದಾರೆ.
ಈ ಹಿಂದೆ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೂ ಈ ಇಬ್ಬರು ಮುಖ್ಯಮಂತ್ರಿಗಳು ಗೈರಾಗಿದ್ದರು.