ರೋಹ್ಟಕ್ (ಹರಿಯಾಣ) :ಕೊರೊನಾ ವೈರಸ್ ತಡೆಗಟ್ಟಲು ವಿಧಿಸಲಾಗಿರುವ ಕಟ್ಟುನಿಟ್ಟಿನ ಲಾಕ್ಡೌನ್ ದೇಶದ ಎಲ್ಲರ ಮೇಲೂ ಒಂದಿಲ್ಲೊಂದು ರೀತಿಯ ಪರಿಣಾಮ ಬೀರಿದೆ. ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಉದ್ಯೋಗಸ್ಥರು, ಕಾರ್ಮಿಕರು ಹೀಗೆ ಎಲ್ಲರೂ ಒಂದು ರೀತಿ ಕಷ್ಟ ಅನುಭವಿಸುವಂತಾಗಿದೆ. ಅದರಲ್ಲೂ ಕೆಲಸ ಹುಡುಕಿಕೊಂಡು ಊರು ಬಿಟ್ಟು ದೂರದೂರಿಗೆ ಹೋದ ಕಾರ್ಮಿಕರ ಪಾಡಂತೂ ಹೇಳತೀರದಾಗಿದೆ. ಲಾಕ್ಡೌನ್ ಮುಂದುವರಿದಷ್ಟೂ ಇವರ ಜೀವನ ನರಕವಾಗುತ್ತಿದೆ.
ಬಡ ಕಾರ್ಮಿಕರು ಹೇಗಾದರೂ ಮಾಡಿ ತಮ್ಮ ಊರು ಸೇರಿಕೊಂಡರೆ ಸಾಕು ಎಂದು ದೇವರಲ್ಲಿ ನಿತ್ಯ ಮೊರೆ ಇಡುತ್ತಿದ್ದಾರೆ. ಆದರೆ, ಇದರಲ್ಲಿ ಕೆಲವರು ಹೇಗೋ ಧೈರ್ಯ ಮಾಡಿ ಊರು ಸೇರಲು ತಮ್ಮ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಇಂಥದೇ ಒಂದು ಸಾಹಸ ಮಾಡಿದ ಕಾರ್ಮಿಕನೋರ್ವ ಸೈಕಲ್ ಮೇಲೆ 750 ಕಿ.ಮೀ ಪ್ರಯಾಣಿಸಿ ತನ್ನೂರು ತಲುಪಿದ್ದಾನೆ ಎಂದರೆ ನಂಬಲೇಬೇಕು.