ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದು, ಈ ವೇಳೆ ಲಾಕ್ಡೌನ್ ಅಂತ್ಯವಾಗಿದ್ದರೂ, ಕೊರೊನಾ ನಾಶವಾಗಿಲ್ಲ. ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಜನರು ಕಷ್ಟಪಟ್ಟಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಹಬ್ಬದ ಸಂದರ್ಭದಲ್ಲಿ ಜನರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಿ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಲಸಿಕೆ ಬರುವವರೆಗೂ ಹೋರಾಡಬೇಕು. ಅದು ಬರುವವರೆಗೆ ಬೇಜವಾಬ್ದಾರಿ ಬೇಡ. ಎಲ್ಲಿಯವರೆಗೆ ಕೊರೊನಾ ವ್ಯಾಕ್ಸಿನ್ ಬರುವುದಿಲ್ಲವೂ ನಾವು ಅಲ್ಲಿಯವರೆಗೆ ಮಹಾಮಾರಿ ವಿರುದ್ದ ಹೋರಾಡಬೇಕು ಎಂದರು.
ದೇಶವನ್ನುದ್ದೇಶಿಸಿ ನಮೋ ಭಾಷಣ ದೇಶದಲ್ಲಿ ಕೊರೊನಾದಿಂದ ಮರಣ ಪ್ರಮಾಣ ಕಡಿಮೆ ಇದೆ. ವೈರಸ್ನಿಂದ ದೇಶ ಹಾಳಾಗಲು ಬಿಡಬಾರದು. ನಮ್ಮ ಪ್ರಯತ್ನದಿಂದ ದೇಶ ಸ್ಥಿರವಾಗಿದೆ. ಕಳೆದ 7 - 8 ತಿಂಗಳಿಂದ ನಾವು ಸಂಕಷ್ಟದಲ್ಲಿದ್ದೇವೆ. ವೈರಸ್ ವಿರುದ್ಧ ಹೋರಾಡುವ ಲಸಿಕೆ ದೇಶದಲ್ಲಿ ಇನ್ನು ಬಂದಿಲ್ಲ. ಪ್ರತಿಯೊಬ್ಬರಿಗೂ ಲಸಿಕೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಅಲ್ಲಿಯವರೆಗೆ ಕೊರೊನಾ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಿ. ಮಾಸ್ಕ್ ಹಾಕಿಕೊಳ್ಳದೇ ಹೊರಗಡೆ ಬರುವುದು ಅಪಾಯಕಾರಿ ಎಂದು ತಿಳಿಸಿದರು.
ದೇಶದಲ್ಲಿ ಹೇರಿಕೆ ಮಾಡಿರುವ ಲಾಕ್ಡೌನ್ ಮುಗಿದು ಹೋಗಿದೆ. ಕೊರೊನಾ ವೈರಸ್ ಹಾವಳಿ ಇಲ್ಲ ಎಂದು ದೇಶದ ಜನರು ಯಾವುದೇ ಕಾರಣಕ್ಕೂ ಮೈಮರೆಯಬಾರದು. ಮಾಸ್ಕ್ ಇಲ್ಲದೇ ಹೊರಗೆ ಹೋಗಬೇಡಿ. ಇದರಿಂದ ನಿಮ್ಮ ಜತೆಗೆ ನಿಮ್ಮ ಕುಟುಂಬ ಸದಸ್ಯರಿಗೂ ಅಪಾಯ ಇರುತ್ತದೆ ಎಂದಿದ್ದಾರೆ.
ನಮ್ಮ ದೇಶದ ವಿಜ್ಞಾನಿಗಳು ಜೀವ ಪಣಕ್ಕಿಟ್ಟು ಲಸಿಕೆ ಕಂಡು ಹಿಡಿಯುವ ಕೆಲಸ ಮಾಡ್ತಿದ್ದಾರೆ. ಈ ವೇಳೆ, ಸ್ವಲ್ಪ ಮೈಮರೆತರೂ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಕೋವಿಡ್ ಟೆಸ್ಟಿಂಗ್ನಲ್ಲಿ ನಾವು ಎಲ್ಲ ದೇಶಗಳಿಗಿಂತಲೂ ಮುಂದೆ ಇದ್ದೇವೆ ಎಂದರು.
ಯಾಮಾರಿದ್ರೆ ಜೀವಕ್ಕೆ ಆಪತ್ತು ಎಂದ ನಮೋ
ಮನೆಯಿಂದ ಹೊರಗಡೆ ಬರುವ ವೇಳೆ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಬಳಕೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿರುವ ನಮೋ, ನನಗೆ ನಿಮ್ಮ ಸುರಕ್ಷತೆ ಅತಿ ಮುಖ್ಯ, ಹೀಗಾಗಿ ಕೊರೊನಾ ಮಾರ್ಗಸೂಚಿ ಅನುಸರಿಸಿ ಹಬ್ಬ ಆಚರಣೆ ಮಾಡಿ ಎಂದು ಮನವಿ ಮಾಡಿದರು. ಹೊರಗಡೆ ಹೋಗುವಾಗ ಎಚ್ಚರದಿಂದಿರಿ ಎಂದ ನಮೋ, ಭಾರತದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 83 ಜನರು ಸಾವನ್ನಪ್ಪುತ್ತಿದ್ದಾರೆ. ಟೆಸ್ಟಿಂಗ್ ವಿಚಾರದಲ್ಲಿ ನಾವು ಬೇರೆ ದೇಶಗಳಿಗಿಂತಲೂ ಮುಂದೆ ಇದ್ದೇವೆ ಎಂದರು.