ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಭೂಮಿಪೂಜೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಯೋಧ್ಯೆಯ ಪ್ರತಿಯೊಂದು ಬೀದಿಯೂ ಅಲಂಕೃತ ದೀಪಗಳಿಂದ ಕಂಗೊಳಿಸುತ್ತಿವೆ.
ದೀಪೋತ್ಸವದ ನಿಮಿತ್ತ ಜನರು ಸರಯು ನದಿಯ ದಡದಲ್ಲಿ ದೀಪಗಳನ್ನು ಬೆಳಗಿಸಿದರು. ಇಂದು ನಡೆಯಲಿರುವ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರು ಆಗಮಿಸಲಿದ್ದಾರೆ.
ಭೂಮಿ ಪೂಜೆ ಹಿನ್ನೆಲೆಯಲ್ಲಿ ಇಡೀ ಅಯೋಧ್ಯೆಯನ್ನು ಅಲಂಕರಿಸಲಾಗಿದ್ದು, ಸಂಪೂರ್ಣ ಸಿದ್ಧತೆಗಳನ್ನು ಮಾಡಲಾಗಿದೆ. ಸರಯು ನದಿಯ ದಡದಲ್ಲಿರುವ ರಾಮ್ ಕಿ ಪೈಡಿಯಲ್ಲಿ 11,000 ದೀಪಗಳನ್ನು ಬೆಳಗಿಸಲಾಗುವುದು ಮತ್ತು ಅಯೋಧ್ಯೆಯ ಎಲ್ಲ ಮನೆಗಳು ಮತ್ತು ದೇವಾಲಯಗಳಲ್ಲಿ ಆಗಸ್ಟ್ 4 ಮತ್ತು 5ರ ರಾತ್ರಿ ದೀಪಗಳನ್ನು ಬೆಳಗಿಸುವ ಮೂಲಕ 'ದೀಪೋತ್ಸವ' ಆಚರಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದರು.
'ದೀಪೋತ್ಸವ'ದ ನಿಮಿತ್ತ ಯೋಗಿ ಆದಿತ್ಯನಾಥ್ ಅವರು ಲಖನೌನ ತಮ್ಮ ಅಧಿಕೃತ ನಿವಾಸದಲ್ಲಿ ಪಟಾಕಿ ಸಿಡಿಸಿ ಮಣ್ಣಿನ ದೀಪಗಳನ್ನು ಬೆಳಗಿಸಿದರು. ರಾಮ ಮಂದಿರ ನಿರ್ಮಾಣ ಕಾರ್ಯವು ಶಿಲಾನ್ಯಾಸ ಸಮಾರಂಭದ ನಂತರ ಪ್ರಾರಂಭವಾಗಲಿದ್ದು, ಇಂದಿನ ಕಾರ್ಯಕ್ರಮಕ್ಕೆ ವಿವಿಧ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗಿದೆ.
-