ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಗೌರವ ಸಲ್ಲಿಸಿದ್ದಾರೆ.
1984 -89 ರ ನಡುವೆ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿ, 1944 ರಲ್ಲಿ ಈ ದಿನ ಜನಿಸಿದರು. 1991 ರಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಎಲ್‌ಟಿಟಿಇ ಉಗ್ರರು ಹತ್ಯೆ ಮಾಡಿದ್ದರು. ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಜಿ ಅವರ ಅವರ ಜನ್ಮ ದಿನಾಚರಣೆಯಂದು ಗೌರವ ಸಲ್ಲಿಸುತ್ತೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ರಾಜೀವ್ ಗಾಂಧಿ ಅವರ ಕಾಲಕ್ಕಿಂತ ಬಹಳ ಮುಂದಿನದನ್ನು ಚಿಂತಿಸುತ್ತಿದ್ದ ಮುಂದಾಲೋಚನೆ ಇಟ್ಟುಕೊಂಡಿದ್ದ ಒಬ್ಬ ಅದ್ಭುತ ವ್ಯಕ್ತಿ. ಎಲ್ಲಕ್ಕಿಂತ ಮಿಗಿಲಾಗಿ ಅವರು ಸಹಾನುಭೂತಿ ಮತ್ತು ಪ್ರೀತಿಯ ಮನುಷ್ಯರಾಗಿದ್ದರು. ಅವರನ್ನು ತಂದೆಯಾಗಿ ಪಡೆಯಲು ನಾವು ತುಂಬಾ ಅದೃಷ್ಟ ಹೊಂದಿದ್ದೆವು. ಮತ್ತು ಆ ವಿಷಯದಲ್ಲಿ ಹೆಮ್ಮೆ ಪಡುತ್ತೇವೆ. ಅವರನ್ನು ನಾವು ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತೇವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
20 ಆಗಸ್ಟ್ 1944 ರಂದು ಜನಿಸಿದ ರಾಜೀವ್ ಗಾಂಧಿ, ಅಕ್ಟೋಬರ್ 1984 ರಲ್ಲಿ ಅಧಿಕಾರ ವಹಿಸಿಕೊಂಡಾಗ ಭಾರತದ ಅತ್ಯಂತ ಕಿರಿಯ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2 ಡಿಸೆಂಬರ್ 1989 ರವರೆಗೆ ಅವರು ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮೇ 1991 ರಲ್ಲಿ ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಂ (ಎಲ್‌ಟಿಟಿಇ) ಉಗ್ರರು ಆತ್ಮಾಹುತಿ ಬಾಂಬರ್ ಮೂಲಕ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ್ದರು. ಈ ದಿನವನ್ನು ಕಾಂಗ್ರೆಸ್ 'ಸದ್ಭಾವನ ದಿವಸ್' ಎಂದು ಆಚರಿಸುತ್ತೆ.