ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಮೃತಪಟ್ಟರೆ ಅಂತವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಮೃತಪಡುವ ಸಿಬ್ಬಂದಿ ಕುಟುಂಬಕ್ಕೆ ಕೋಟಿ ರೂ. ಪರಿಹಾರ: ಸಿಎಂ ಕೇಜ್ರಿವಾಲ್ - ಸಿಬ್ಬಂದಿ ಕುಟುಂಬಕ್ಕೆ ಕೋಟಿ ರೂ. ಪರಿಹಾರ
ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ, ಅವರ ಪ್ರಾಣ ಉಳಿಸುವ ಕಾರ್ಯದಲ್ಲಿ ಯಾವೊಬ್ಬ ವೈದ್ಯಕೀಯ, ರಕ್ಷಣಾ, ಪೊಲೀಸ್ ಸಿಬ್ಬಂದಿ ಮೃತಪಟ್ಟರೂ ಅವರ ಕುಟುಂಬಕ್ಕೆ ದೆಹಲಿ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಕೇಜ್ರಿವಾಲ್, ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ, ಅವರ ಪ್ರಾಣ ಉಳಿಸುವ ಕಾರ್ಯದಲ್ಲಿ ಯಾರಾದರೂ ವೈದ್ಯರು, ನರ್ಸ್ಗಳು, ಸ್ವಚ್ಛತಾ ಸಿಬ್ಬಂದಿ, ಲ್ಯಾಬ್ ಸಿಬ್ಬಂದಿ ಹಾಗೂ ಪೊಲೀಸ್ ಮತ್ತು ರಕ್ಷಣಾ ಸಿಬ್ಬಂದಿಗೆ ಸೋಂಕು ತಗುಲಿ ಮೃತಪಟ್ಟರೆ ಮೃತರ ಕುಟುಂಬಕ್ಕೆ ದೆಹಲಿ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ದೆಹಲಿಯಲ್ಲಿ ಒಟ್ಟು 60 ಸ್ಯಾನಿಟೈಸೇಷನ್ ಯಂತ್ರಗಳನ್ನು ನಿಯೋಜಿಸಲಾಗಿದೆ. ರಾಜಧಾನಿಯಲ್ಲಿ 71 'ಕಂಟೈನ್ಮೆಂಟ್ ಝೋನ್ಗಳಿದ್ದು, ಅಲ್ಲಿ ವಾಸಿಸುವ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ದಯವಿಟ್ಟು ನಿಮ್ಮ ಮನೆಯೊಳಗೇ ಇರಿ. ನೆರೆಹೊರೆಯ ಮನೆಗಳಿಗೆ ಭೇಟಿ ನೀಡದಿರಿ ಎಂದು ಕೇಜ್ರಿವಾಲ್, ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.