ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ ಹಗ್ಗಜಗ್ಗಾಟಕ್ಕೆ ಕೊನೆಗೂ ಇಂದು ಮುಕ್ತಿ ಸಿಕ್ಕಿದೆ. ಮುಂಬರುವ ಲೋಕಸಭೆ ಚುನಾವಣೆಗಾಗಿ ರಾಜ್ಯದಲ್ಲಿ 28 ಸಂಸದೀಯ ಕ್ಷೇತ್ರಗಳಿಗಾಗಿ ಕಾಂಗ್ರೆಸ್-ಜೆಡಿಎಸ್ ನಡುವಿನ ಸೀಟು ಹಂಚಿಕೆ ಫೈನಲ್ ಆಗಿದೆ.
ಇಂದು ನಡೆದ ಅಂತಿಮ ಹಂತದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 28 ಕ್ಷೇತ್ರಗಳ ಪೈಕಿ ಜೆಡಿಎಸ್ 8ರಲ್ಲಿ ಹಾಗೂ ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಕಳೆದ ಕೆಲ ದಿನಗಳಿಂದ ಸೀಟು ಹಂಚಿಕೆ ವಿಚಾರವಾಗಿ ಎರಡು ಪಕ್ಷಗಳ ನಡುವೆ ಮೇಲಿಂದ ಮೇಲೆ ಸಭೆ ಕೂಡ ನಡೆದಿದ್ದವು. ಇದೇ ವೇಳೆ ಜೆಡಿಎಸ್ ವರಿಷ್ಠ ದೇವೇಗೌಡ 10 ಸೀಟುಗಳಿಗಾಗಿ ಬೇಡಿಕೆ ಇಟ್ಟಿದ್ದರು.
ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಜತೆ ನಡೆದ ಮಾತುಕತೆಯ ವೇಳೆ ಸೀಟು ಹಂಚಿಕೆ ಅಂತಿಮಗೊಂಡಿದೆ.ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಹಾಸನ, ಮಂಡ್ಯ, ಬೆಂಗಳೂರು ಉತ್ತರ, ವಿಜಯಪುರ ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲಾಗಿದ್ದು, ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಲಿದೆ.
ಕಾಂಗ್ರೆಸ್ ಸ್ಪರ್ಧೆ ಮಾಡುವ ಕ್ಷೇತ್ರ
ಚಿಕ್ಕೋಡಿ,ಬೆಳಗಾವಿ,ಬಾಗಲಕೋಟೆ,ಕಲಬುರಗಿ,ರಾಯಚೂರು,ಬೀದರ್,ಕೊಪ್ಪಳ,ಬಳ್ಳಾರಿ,ಹಾವೇರಿ,ಧಾರವಾಡ,ದಾವಣಗೆರೆ,ದಕ್ಷಿಣಕನ್ನಡ,ಚಿತ್ರದುರ್ಗ,ಚಾಮರಾಜನಗರ,ಬೆಂಗಳೂರು ಗ್ರಾಂ,ಬೆಂಗಳೂರು ಸೆಂಟ್ರಲ್,ಚಿಕ್ಕಬಳ್ಳಾಪುರ ಹಾಗೂ ಕೋಲಾರ