ನವದೆಹಲಿ:ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಜಿಎಸ್ಟಿ ಪಾವತಿ ಅವಧಿ ಮುಂದೂಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದೆ.
ಈ ಬಗ್ಗೆ ವಿತ್ತ ಸಚಿವೆಗೆ ಪತ್ರ ಕಳುಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಂಎಸ್ಎಂಇಗಳ ಆರ್ಥಿಕ ಪುನಶ್ಚೇತನಕ್ಕಾಗಿ ಅವರ ಅಗತ್ಯಗಳನ್ನು ಪೂರೈಸಲು ಪ್ರಸ್ತುತ ಜಿಎಸ್ಟಿ ನಿಯಮಗಳನ್ನು ಸುಧಾರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎಂಎಸ್ಎಂಇಗಳು ಭಾರತದ ಆರ್ಥಿಕತೆಯ ಪ್ರಮುಖ ಭಾಗ. ಲಾಕ್ಡೌನ್ನಿಂದಾಗಿ ಈ ಉದ್ಯಮಗಳು ತಮ್ಮ ಉಳಿವಿಗಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಪ್ರಕಾರ, ಕೇಂದ್ರ ಸರ್ಕಾರವು ಅವರ ಸಮಸ್ಯೆಯನ್ನು ಪರಿಹರಿಸಲು ವಿಫಲವಾದರೆ, ಸುಮಾರು 50% ಎಂಎಸ್ಎಂಇಗಳು ರಾಜ್ಯದಲ್ಲಿ ತಮ್ಮ ಕಾರ್ಯವನ್ನು ಪುನರಾರಂಭಿಸುವುದಿಲ್ಲ ಎಂದು ಶಿವಕುಮಾರ್ ಹೇಳಿದರು.
ಆದಾಯದ ನಷ್ಟದಿಂದಾಗಿ ಈ ಉದ್ಯಮಗಳು ಬಂಡವಾಳದ ಬಿಕ್ಕಟ್ಟಿನಲ್ಲಿವೆ. ಜಿಎಸ್ಟಿ ಪಾವತಿಯನ್ನು ಸರ್ಕಾರ ಸ್ಥಗಿತಗೊಳಿಸಲು ಸಾಧ್ಯವಾಗದಿದ್ದರೆ ಜಿಎಸ್ಟಿ ಪಾವತಿಸುವ ಅವಧಿಯನ್ನು ಮುಂದೂಡುವ ಮೂಲಕ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಮುಂದಿನ 6 ತಿಂಗಳುಗಳವರೆಗೆ ಬಂಡವಾಳ ಪರಿಹಾರವನ್ನು ಒದಗಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.