ಇಂದೋರ್: ದೇಶೀಯ ಕ್ರಿಕೆಟ್ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ಆರಂಭದಿಂದಲೂ ಅಬ್ಬರಿಸಿದ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಪ್ರಶಸ್ತಿಗೆ ಮುತ್ತಿಕ್ಕಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮಹಾರಾಷ್ಟ್ರ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 155 ರನ್ ಗಳಿಕೆ ಮಾಡಿತ್ತು. ಮಹಾರಾಷ್ಟ್ರದ ಪರ ನೌಷದ್ ಶೇಖ್(69) ರನ್ ಗಳಿಕೆ ಮಾಡಿ ತಂಡ 150ರ ಗಡಿ ದಾಟುವಂತೆ ಮಾಡಿದರು.
ಇದರ ಬೆನ್ನತ್ತಿದ್ದ ಕರ್ನಾಟಕ ತಂಡ ಆರಂಭದಲ್ಲೇ ಶರತ್(2) ವಿಕೆಟ್ ಕಳೆದುಕೊಂಡಿತು. ಆದರೆ ಈ ವೇಳೆ ಒಂದಾದ ರೋಹನ್ ಕದಂ ಹಾಗೂ ಮಯಾಂಕ್ ಅಗರ್ವಾಲ್ ತಂಡಕ್ಕೆ ಅದ್ಭುತ ಕಾಣಿಕೆ ನೀಡಿದರು.
ರೋಹನ್ 39 ಎಸೆತಗಳಲ್ಲಿ 60 ರನ್ ಗಳಿಕೆ ಮಾಡಿದರೆ, ಮಯಾಂಕ್ 57 ಎಸೆತಗಳಲ್ಲಿ 85 ರನ್ ಗಳಿಕೆ ಮಾಡಿ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು. ಕೊನೆಯದಾಗಿ ತಂಡ 18.3 ಓವರ್ಗಳಲ್ಲಿ 2 ವಿಕೆಟ್ನಷ್ಟಕ್ಕೆ 159 ರನ್ ಗಳಿಕೆ ಮಾಡಿ ಗೆಲುವಿನ ಕೇಕೆ ಹಾಕಿತು.
ವಿಶೇಷವೆಂದರೆ ಕರ್ನಾಟಕ ಲೀಗ್ ಹಂತದ ಎಲ್ಲ ಪಂದ್ಯಗಳಲ್ಲೂ ಹಾಗೂ ಸೂಪರ್ ಲೀಗ್ ಎಲ್ಲ ಪಂದ್ಯ ಮತ್ತು ಫೈನಲ್ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ ಸೋಲಿಲ್ಲದ ಸರದಾರನಾಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ದೇಶಿಯ ಕ್ರಿಕೆಟ್ನಲ್ಲಿ ಕರ್ನಾಟಕ ಒಟ್ಟು 14 ಪಂದ್ಯಗಳನ್ನ ಸತತವಾಗಿ ಗೆಲುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದೆ. ಇಲ್ಲಿಯವರೆಗೆ ಟಿ-20 ಕ್ರಿಕೆಟ್ನಲ್ಲಿ ಮೂಡಿ ಬಂದಿರುವ ಹೊಸ ರೆಕಾರ್ಡ್ ಇದಾಗಿದೆ. ಮಯಾಂಕ್ ಅಗರವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.