ಮುಂಬೈ: ಟ್ವೀಟ್ ಹಾಗೂ ಸಂದರ್ಶನಗಳ ಮೂಲಕ ಧಾರ್ಮಿಕ ಅಸಮಾನತೆಯನ್ನು (ಗುಂಪುಗಳ ನಡುವೆ ದ್ವೇಷ) ಸೃಷ್ಟಿಸುವ ಯತ್ನದ ಆರೋಪದ ಮೇಲೆ ಮುಂಬೈ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ಚಾಂಡೆಲ್ ಇಂದು (ಸೋಮವಾರ) ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ದೇಶದ್ರೋಹ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದ್ದು, ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಣಾವತ್ ಮತ್ತು ಅವರ ಸಹೋದರಿ ವಿರುದ್ಧ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಎಫ್‌ಐಆರ್ ಮತ್ತು ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆ ಕಂಗನಾ ಮತ್ತು ರಂಗೋಲಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರ ವಕೀಲ ರಿಜ್ವಾನ್ ಸಿದ್ದಿಕಿ ತಿಳಿಸಿದ್ದಾರೆ.
ವಿಚಾರಣೆಗಾಗಿ ಪೊಲೀಸರ ಮುಂದೆ ಹಾಜರಾಗುವಂತೆ ಇವರಿಬ್ಬರ ವಿರುದ್ಧ ಹೊರಡಿಸಲಾದ ಸಮನ್ಸ್ ಅನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿದ್ದು ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿದೆ ಎಂದು ರಿಜ್ವಾನ್ ಹೇಳಿದ್ದಾರೆ.
ಎರಡು ಸಮುದಾಯಗಳ ನಡುವೆ ದ್ವೇಷವನ್ನು ಹುಟ್ಟುಹಾಕಿದ ಆರೋಪದ ಮೇಲೆ ಮುಂಬೈ ಪೊಲೀಸರು ಕಳೆದ ವಾರ ನವೆಂಬರ್ 23 ಮತ್ತು 24 ರಂದು ತಮ್ಮ ಹೇಳಿಕೆಗಳನ್ನು ದಾಖಲಿಸಲು ರಣಾವತ್ ಮತ್ತು ಅವರ ಸಹೋದರಿಯನ್ನು ಮೂರನೇ ಬಾರಿಗೆ ಕರೆಸಿಕೊಳ್ಳಲಾಗಿತ್ತು.
ಐಪಿಸಿ ಸೆಕ್ಷನ್‌ಗಳು 153-ಎ (ಧರ್ಮ, ಜನಾಂಗದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸುವುದು), 295-ಎ (ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶಪೂರ್ವಕ ಕೃತ್ಯಗಳು) ಮತ್ತು 124-ಎ (ದೇಶದ್ರೋಹ), 34 ರ ಅಡಿಯಲ್ಲಿ ಪೊಲೀಸರು ರಣಾವತ್ ಮತ್ತು ಅವರ ಸಹೋದರಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇಂದು ಬಾಂದ್ರಾ ಪೊಲೀಸರ ಮುಂದೆ ಹಾಜರಾಗುವಂತೆ ಕೋರಲಾಗಿತ್ತು.
ಬಾಲಿವುಡ್ ಕಾಸ್ಟಿಂಗ್ ನಿರ್ದೇಶಕ ಮತ್ತು ಫಿಟ್ನೆಸ್ ತರಬೇತುದಾರ ಮುನವರ್ ಅಲಿ ಸಯ್ಯದ್ ಅವರು ಈ ಕುರಿತು ದೂರು ಸಲ್ಲಿಸಿದ್ದರು. ಬಾಲಿವುಡ್ ಚಲನಚಿತ್ರೋದ್ಯಮವನ್ನು ನಿರಂತರವಾಗಿ ದೂಷಿಸುತ್ತಿದ್ದಾರೆ. ಅಲ್ಲದೇ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುವ ಜನರನ್ನು ಮಾದಕ ವ್ಯಸನಿಗಳು, ಕೋಮು-ಪಕ್ಷಪಾತದ ಜನರು, ಕೊಲೆಗಾರರು ಎಂಬಿತ್ಯಾದಿ ಎಂದು ಅವರ ಟ್ವೀಟ್ ಮತ್ತು ಸಂದರ್ಶನಗಳ ಮೂಲಕ ಹಬ್ ಆಗಿ ಚಿತ್ರಿಸುತ್ತಿದ್ದಾರೆ. ಇದು ಜನರ ಮನಸ್ಸಿನಲ್ಲಿ ಬಾಲಿವುಡ್‌ನ ಬಗ್ಗೆ ಕೆಟ್ಟ ಚಿತ್ರಣವನ್ನು ಸೃಷ್ಟಿಸುತ್ತಿದೆ ಮತ್ತು ಎರಡು ಸಮುದಾಯಗಳ ಜನರ ನಡುವೆ ಮತ್ತು ಸಾಮಾನ್ಯ ಜನರ ಮನಸ್ಸಿನಲ್ಲಿ ಕೋಮು ವಿಭಜನೆ ಮತ್ತು ಬಿರುಕುಗಳನ್ನು ಸೃಷ್ಟಿಸುತ್ತಿದೆ ಎಂದು ಉಲ್ಲೇಖಿಸಿ ಮುನವ್ವಾರ್ ಅಲಿ ಸಯ್ಯದ್ ದೂರು ನೀಡಿದ್ದಾರೆ.