ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆ ಭಾಗಶಃ ಧ್ವಂಸಗೊಳಿಸಿರುವ ಮನೆಯನ್ನು ನವೀಕರಣಗೊಳಿಸಲು ನನ್ನ ಬಳಿ ಹಣವಿಲ್ಲ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗತ್ತಿನಲ್ಲಿ ಉನ್ನತ ಸ್ಥಾನಕ್ಕೆ ಏರುವ ಮಹಿಳೆಯ ಧೈರ್ಯದ ಸಂಕೇತವಾಗಿ ಈ ಧ್ವಂಸಗೊಂಡಿರುವ ಕಚೇರಿಯನ್ನು ಇಟ್ಟುಕೊಳ್ಳುತ್ತೇನೆ ಎಂದು ಕಂಗನಾ ಮಹಾರಾಷ್ಟ್ರದ ಶಿವಸೇನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನವರಿ 15ರಂದು ನಾನು ಕಚೇರಿಯನ್ನು ತೆರೆದಿದ್ದೆ. ಕೊರೊನಾ ಕಾರಣದಿಂದ ಸ್ವಲ್ಪ ದಿನ ಮಾತ್ರವೇ ಇಲ್ಲಿ ಕೆಲಸ ಮಾಡಲು ಸಾಧ್ಯವಾಯಿತು. ತುಂಬಾ ಮಂದಿ ಇಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಬೃಹನ್ಮುಂಬೈ ಮಹಾನಗರ ಪಾಲಿಕೆ ಕೆಲವು ದಿನಗಳ ಹಿಂದೆ ಕಂಗನಾ ಅವರ ಕಚೇರಿಯನ್ನು ತೆರವುಗೊಳಿಸಲು ಮುಂದಾಗಿತ್ತು. ಈ ವೇಳೆ ಬಾಂಬೆ ಹೈಕೋರ್ಟ್ ಕಂಗನಾರ ಮನವಿಗೆ ಸ್ಪಂದಿಸಿ ಕಟ್ಟಡ ತೆರವು ಕಾರ್ಯಾಚರಣೆಗೆ ತಡೆ ನೀಡಿತ್ತು. ಇದಾದ ನಂತರ ವಿಚಾರಣೆ ಮುಂದುವರೆದಿದ್ದು, ಸೆಪ್ಟೆಂಬರ್ 22ಕ್ಕೆ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಮುಂದೂಡಿದೆ.