ಚೆನ್ನೈ:ಜೂನ್ 15ರಂದು ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಭಾರತೀಯ ಸೈನಿಕರ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ನಟ, ರಾಜಕಾರಣಿ ಕಮಲ್ ಹಾಸನ್ ಪ್ರತಿಕ್ರಿಯಿಸಿ ಇದೊಂದು ಅಪ್ರಚೋದಿತ ದಾಳಿ ಎಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರಶ್ನಿಸುವ ಹಕ್ಕಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಪ್ರಧಾನಿ ಅವರು ಉತ್ತರ ನೀಡಬೇಕು. ಪ್ರಶ್ನೆಗಳಿಗೆ ಉತ್ತರಿಸುವುದರಿಂದ ಸೈನ್ಯಕ್ಕೆ ಯಾವುದೇ ರೀತಿ ಅಗೌರವ ಉಂಟಾಗುವುದಿಲ್ಲ. ಮೋದಿಯವರು ಅವರು ಭಾವನಾತ್ಮಕವಾಗಿ ಜನರ ಬಾಯಿಯನ್ನು ಮುಚ್ಚಿಸುತ್ತಿದ್ದಾರೆ. ಇಂತಹ ಕಿಡಿಗೇಡಿತನದ ಕೆಲಸ ಮಾಡುವುದನ್ನು ನಿಲ್ಲಿಸುವಂತೆ ನಾನು ಪ್ರಧಾನಿ ಮತ್ತು ಅವರ ಬೆಂಬಲಿಗರಿಗೆ ಪ್ರಾಮಾಣಿಕವಾಗಿ ವಿನಂತಿಸುತ್ತೇನೆ" ಎಂದು ಹೇಳಿದರು.
ಸ್ವಾತಂತ್ರ್ಯನಂತರ ಚೀನಾಕ್ಕೆ ಅತೀ ಹೆಚ್ಚು ಭೇಟಿ ನೀಡಿದ ಪ್ರಧಾನಿ ಎಂದರೇ ಅದು ಮೋದಿಯವರು. ಮಹಾಬಲಿಪುರಂ ಶೃಂಗಸಭೆಯು ರಾಜತಾಂತ್ರಿಕ ಯಶಸ್ಸು ಕಂಡಿದೆ ಎಂದು ಅವರು ಹೇಳಿದ್ದಾರೆ. ಆದರೆ, ಚೀನಿಯರು ನಮ್ಮ ಸೈನಿಕರನ್ನು ನಿರಾಯುಧವಾಗಿ ಕೊಲ್ಲುವ ಮೂಲಕ ಬೆನ್ನಿಗೆ ಚೂರಿ ಇರಿಯುತ್ತಿದ್ದಾರೆ. ಕೇಂದ್ರ ಸರ್ಕಾರ ಅವರ ತಂತ್ರಗಳನ್ನು ಅರಿಯುವಲ್ಲಿ ವಿಫಲವಾಗಿದೆ ಎಂದು ಹೇಳುವ ಮೂಲಕ ಕಿಡಿಕಾರಿದರು.
ಗಡಿಯಲ್ಲಿ ಚೀನಾದ ಆಕ್ರಮಣವನ್ನು ನಿಯಂತ್ರಿಸಲು ಏನು ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ಕಮಲ್ ಹಾಸನ್ ಪ್ರಶ್ನಿಸಿದ್ರು. ವದಂತಿಗಳನ್ನು ತಡೆಯಲು ಗಾಲ್ವಾನ್‌ನಲ್ಲಿ ಆ ದಿನ ನಿಖರವಾಗಿ ಏನಾಯಿತು ಎಂಬುದರ ಕುರಿತು ಸ್ಪಷ್ಟಪಡಿಸುವಂತೆ ಅವರು ಆಗ್ರಹಿಸಿದ್ರು. ಶುಕ್ರವಾರದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ 'ನಮ್ಮ ಭೂಪ್ರದೇಶದೊಳಗೆ ಯಾರೊಬ್ಬರೂ ಬಂದಿಲ್ಲ ಅಥವಾ ಯಾರೂ ನಮ್ಮ ಸೈನಿಕರನ್ನು ಸೆರೆಹಿಡಿದಿಲ್ಲ ಎಂದು ಹೇಳಿದ್ದರು' ಈ ಹಿನ್ನಲೆಯಲ್ಲಿ ಈಗ ಕಮಲ್ ಹಾಸನ್ ಅವರ ಹೇಳಿಕೆ ಬಂದಿದೆ.