ತಿರುವನಂತಪುರಂ(ಕೇರಳ):21ರ ಹರೆಯದ ಪ್ರೇಮಿಯೊಬ್ಬ ಪ್ರೀತಿಸಿದವಳು ತನಗೆ ದೊರೆಯಲಿಲ್ಲ ಎಂಬ ಕಾರಣಕ್ಕೆ ಕತ್ತು ಸೀಳಿ ಕೊಲೆಗೈದಿದ್ದು, ನಂತರ ಆತನು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಶಿಕಾ(21) ಮೃತ ಯುವತಿ, ಅನು(21) ಪಾಗಲ್ ಪ್ರೇಮಿ. ಈ ಘಟನೆ ತಿರುವನಂತಪುರಂನ ಕಾರಕ್ಕೋನಮ್ನಲ್ಲಿ ನಡೆದಿದ್ದು, ಅನು ಎಂಬಾತ ಆಶಿಕಾಳ ಮನೆಯ ಸಮೀಪವೇ ವಾಸಿಸುತ್ತಿದ್ದ ಹಾಗೂ ತನ್ನನ್ನು ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ. ಇದರಿಂದ ಬೇಸತ್ತ ಯುವತಿ ಪೊಲೀಸ್ ಠಾಣೆಗೆ ದೂರನ್ನು ಸಹ ನೀಡಿದ್ದಳು.
ಇನ್ನು ಈ ಕುರಿತು ಪೊಲೀಸರು ಅನುನನ್ನು ಕರೆದು ಬುದ್ದಿವಾದ ಹೇಳಿ ಕಳುಹಿಸಿದ್ದರು. ಸ್ವಲ್ಪ ಸಮಯದವರೆಗೆ ಸುಮ್ಮನಿದ್ದ ಅನು, ಮತ್ತೆ ತನ್ನನ್ನು ಪ್ರೀತಿಸು ಎಂದು ಆಶಿಕಾಳನ್ನು ಪೀಡಿಸುತ್ತಿದ್ದ. ಇದಕ್ಕೆ ಪ್ರೇಯಸಿ ಒಪ್ಪದ ಹಿನ್ನೆಲೆ ಪಾಗಲ್ ಪ್ರೇಮಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಆಶಿಕಾಳ ಕತ್ತು ಸೀಳುತ್ತಿದ್ದಂತೆ ಜೋರಾಗಿ ಕೂಗತೊಡಗಿದ್ದು, ಅಕ್ಕ ಪಕ್ಕದ ಮನೆಯವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ರಕ್ತದ ಹೊಳೆಯಲ್ಲಿ ತೇಲುತ್ತಿದ್ದ ಇಬ್ಬರನ್ನು ಸ್ಥಳೀಯದಲ್ಲೇ ಇರುವ ಕಾರಕ್ಕೋನಮ್ ಮೆಡಿಕಲ್ ಕಾಲೇಜಿಗೆ ಕರೆದೊಯ್ದಿದ್ದಾರೆ. ದುರಾದೃಷ್ಠವಶಾತ್ ಇಬ್ಬರು ಆಸ್ಪತ್ರೆ ತಲುಪುವ ಮುನ್ನವೇ ಅಸುನೀಗಿದ್ದರು.