ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ದುಷ್ಕೃತ್ಯ ಎಸಗಲು ಅಂದೇ ಶಪಥ ಮಾಡಿತ್ತು ಜೈಷೆ... ಕಣ್ಮುಚ್ಚಿ ಕುಳಿತಿತ್ತೇ ಪಾಕ್?

ಭಾರತದ ವಿರುದ್ಧ ಯುದ್ಧ ನಡೆಸುವುದಾಗಿ ಜೈಷೆ ಮೊಹಮ್ಮದ್​ ಸಂಘಟನೆ 2017ರ ಪಾಕ್​ ಸಮಾವೇಶದಲ್ಲಿ ನಿರ್ಧಾರ ಮಾಡಿತ್ತು

ಜೈಷೆ ಮುಖ್ಯಸ್ಥ ಮಸೂದ್​ ಅಜರ್

By

Published : Mar 1, 2019, 3:46 PM IST

ನವದೆಹಲಿ: ಪುಲ್ವಾಮದಲ್ಲಿ ಪೈಶಾಚಿಕ ದಾಳಿ ನಡೆಸಿ, ವೀರ ಯೋಧರ ರಕ್ತ ಹರಿಸಿದ ಉಗ್ರ ಸಂಘಟನೆ ಜೈಷೆ ಮೊಹಮ್ಮದ್​ ಎರಡು ವರ್ಷಗಳ ಹಿಂದೆಯೇ ಭಾರತದ ವಿರುದ್ಧ ಯುದ್ಧ ನಡೆಸುವುದಾಗಿ ಶಪಥ ಮಾಡಿತ್ತು ಎಂದು ಗುಪ್ತಚರ ವರದಿ ಹೇಳಿದೆ.

2017 ನವೆಂಬರ್​ 27ರಂದು ಪಾಕಿಸ್ತಾನದ ಒಕಾರ ಜಿಲ್ಲೆಯಲ್ಲಿ ಜೈಷೆ ಆಯೋಜಿಸಿದ್ದ ಸಮ್ಮೇಳನದಲ್ಲಿ 2 ಸಾವಿರ ಮಂದಿ ಪಾಲ್ಗೊಂಡಿದ್ದರು. ಜೈಷೆ ಮುಖ್ಯಸ್ಥ ಮಸೂದ್​ ಅಜರ್​ನೇ ಇದರ ಮುಂದಾಳತ್ವ ವಹಿಸಿದ್ದ. ಜೈಷೆನ ಅಬ್ದುಲ್​ ರಾವುಫ್​ ಅಸ್ಘರ್​, ಮೊಹಮ್ಮದ್​ ಮಸ್ಕೂದ್​ ಹಾಗೂ ಅಬ್ದುಲ್​ ಮಲಿಕ್​ ತಾಹಿರ್​ ಪ್ರಧಾನ ಭಾಷಣ ಮಾಡಿದ್ದರು. ಈ ವೇಳೆ ಅವರ ಭಾಷೆಯಲ್ಲಿ ಘಾಜ್ವೆ ಇ ಹಿಂದ್​ (ಪವಿತ್ರ ಯುದ್ಧ) ನಡೆಸುವುದಾಗಿ ಶಪಥ ಮಾಡಿದ್ದರು.

ಪಾಕ್​ನಲ್ಲಿಯೇ ಬಹಿರಂಗವಾಗಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿತ್ತು ಎಂಬುದನ್ನು ಇದು ಸಾಬೀತುಪಡಿಸುತ್ತಿದೆ.

ಅಂದು ಪ್ರಚೋದನಕಾರಿ ಭಾಷಣ ಮಾಡಿದ್ದ ಅಸ್ಘರ್​, ಇಂಡೋ-ಪಾಕ್​ನ ಸ್ನೇಹದಿಂದ, ದ್ವಿಪಕ್ಷೀಯ ವ್ಯಾಪಾರದಿಂದ ಜಿಹಾದ್​ಗಾಗಿ ಹಲವಾರು ಯುವಕರು ಬಲಿದಾನ ಮಾಡುವುದು ಮಾತ್ರ ನಿಲ್ಲುವುದಿಲ್ಲ ಎಂದಿದ್ದ. ಅಲ್ಲದೆ, ಇದೇ ಮಾತುಗಳು 2018ರ ಫೆಬ್ರವರಿಯಲ್ಲಿ ಶೋಬಾ ಎ ತಾರುಫ್​ (ಪರಿಚಯ ವಿಭಾಗ) ನಡೆಸಿದ 13 ದಿನಗಳ ಸಂವಾದದಲ್ಲಿ ಸಹ ಮುಂದುವರೆದವು. ಗೋಷ್ಠಿಯಲ್ಲಿ 65 ಉಲ್ಮಾ (ಧಾರ್ಮಿಕ ಗುರುಗಳು) ಸೇರಿ 700 ಮಂದಿ ಭಾಗವಹಿಸಿದ್ದರು ಎಂದೂ ಹೇಳಲಾಗಿದೆ.

ಅದೇ ತಿಂಗಳ 10ರಂದು ಜೈಷೆ ಉಗ್ರರು ಜಮ್ಮುವಿನ ಸಂಜ್ವಾನ ಕ್ಯಾಂಪ್​ ಮೇಲೆ ಮಾಡಿದ ದಾಳಿಯಲ್ಲಿ ಐವರು ಸೇನಾಧಿಕಾರಿಗಳು ಹುತಾತ್ಮರಾಗಿದ್ದರು. ಆ ದಾಳಿ ಸಹ ಅಫ್ಜಲ್​ ಗುರುವಿನ ನೇಣಿಗೇರಿಸಿದ್ದಕ್ಕೆ ಪ್ರತೀಕಾರವಾಗಿತ್ತು ಎಂದು ತಿಳಿದುಬಂದಿದೆ.

2018ರ ಮಾರ್ಚ್​ನಲ್ಲಿಯೂ ಶೋಬಾ ಎ ತಾರುಫ್​​ನ ಪ್ರತಿನಿಧಿಗಳು 17 ದಿನಗಳ ಸಭೆ ನಡೆಸಿದ್ದರು. 50 ಉಲ್ಮಾಗಳು ಸೇರಿ 1500 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.

ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವುದೇ ಪವಿತ್ರ ಯುದ್ಧ ಎಂದು ಕರೆದಿದ್ದ ಜೈಷೆ, ಭಾರಿ ದಾಳಿಗೆ ನಿರಂತರವಾಗಿ ಹೊಂಚು ಹಾಕುತ್ತಲೇ ಇತ್ತು ಎಂದು ಈ ಮೂಲಕ ತಿಳಿದುಬಂದಿದೆ.

ABOUT THE AUTHOR

...view details