ಬೆಂಗಳೂರು :ಕೋವಿಡ್-19 ಎಂಬ ಜಾಗತಿಕ ಮಹಾಮಾರಿ ಭಾರತದ ಅನೇಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದಂತೆ ಕಳೆದ ಏಳು ತಿಂಗಳಿನಿಂದ ನಮ್ಮ ಅಂತರಿಕ್ಷ ಕಾರ್ಯಕ್ರಮದ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರಿತ್ತು. ಆ ಅವಧಿಯಲ್ಲಿ ಸ್ಥಬ್ದವಾಗಿದ್ದ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ (ಇಸ್ರೋ) ಉಪಗ್ರಹ ಉಡಾವಣಾ ಚಟುವಟಿಕೆ ಮತ್ತೆ ಪ್ರಾರಂಭವಾಗಿದೆ. ಬರುವ ನವೆಂಬರ್ 7ರ ಮಧ್ಯಾಹ್ನ 3:02 ಕ್ಕೆ ಪಿಎಸ್ಎಲ್ವಿ-ಸಿ49 ವಾಹನ ಉಡ್ಡಯನ ಮಾಡುವುದಾಗಿ ಹೇಳಿರುವ ಇಸ್ರೋ, ಪ್ರಕಟಣೆ ಮೂಲಕ ಖಚಿತಪಡಿಸಿದೆ.
ಭಾರತದ ಏಕೈಕ ಉಪಗ್ರಹ ಉಡಾವಣಾ ಕೇಂದ್ರ ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಪಿಎಸ್ಎಲ್ವಿಯ ಉಡಾವಣೆಗೊಳ್ಳಲಿದೆ. ಪಿಎಸ್ಎಲ್ವಿ-ಸಿ-49, ಇದು ಭಾರತದ ಹೆಮ್ಮೆಯ ಉಪಗ್ರಹ ಉಡಾವಣಾ ವಾಹನವಾದ ಪಿಎಸ್ಎಲ್ವಿಯ 51ನೇ ಯಾನವಾಗಿದೆ. ಈ ಯಾನದಲ್ಲಿ ಹದಿನೈದು ಮಹಡಿಗಳಷ್ಟು ಎತ್ತರವಿರುವ ದೈತ್ಯ ಪಿಎಸ್ಎಲ್ವಿ ಹತ್ತು ಉಪಗ್ರಹಗಳನ್ನು ಕಕ್ಷೆಗೆ ಕೊಂಡೊಯ್ಯಲಿದೆ. ಆ ಪೈಕಿ ’ಇ ಒ ಎಸ್-01’ ಎಂಬುದು ಮುಖ್ಯವಾದ ಉಪಗ್ರಹವಾಗಿದೆ. ಇದು ಒಂದು ಭೂ ವೀಕ್ಷಣಾ ಉಪಗ್ರಹವಾಗಿದ್ದು ಕೃಷಿ, ಅರಣ್ಯಗಾರಿಕೆ ಹಾಗೂ ಪ್ರಕೃತಿ ವಿಕೋಪಗಳ ನಿರ್ವಹಣಾ ಕ್ಷೇತ್ರಗಳಿಗೆ ನೆರವಾಗಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಇಸ್ರೋ ಹೇಳಿದೆ.
ಉಳಿದ ಒಂಭತ್ತು ಉಪಗ್ರಹಗಳು ವಿದೇಶಿ ಉಪಗ್ರಹಗಳಾಗಿವೆ. ಇವುಗಳನ್ನು ಇಸ್ರೋದ ವಾಣಿಜ್ಯಾತ್ಮಕ ಅಂಗವಾದ ’ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್’ ಸಂಸ್ಥೆಯೊಡನೆ ವಿದೇಶಿ ಸಂಸ್ಥೆಗಳು ಮಾಡಿಕೊಂಡಿರುವ ಒಪ್ಪಂದಕ್ಕೆ ಅನುಗುಣವಾಗಿ ಉಡಾಯಿಸಲಾಗುತ್ತದೆ. ಈಗಾಗಲೇ ಇಸ್ರೋ ಒಟ್ಟು 33 ದೇಶಗಳ 319 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಉಡಾಯಿಸಿದೆ. ಈ ಸಂಬಂಧದಲ್ಲಿ 2017 ರ ಫೆಬ್ರವರಿ 15 ರಂದು ತನ್ನ ಮೂರು ಉಪಗ್ರಹಗಳನ್ನು ಹಾಗೂ 101 ವಿದೇಶಿ ಉಪಗ್ರಹಗಳನ್ನು ಪಿಎಸ್ಎಲ್ವಿಯ ಒಂದೇ ಯಾನದಲ್ಲಿ ಉಡಾಯಿಸುವ ಮೂಲಕ ಇಸ್ರೋ ಒಂದು ದಾಖಲೆ ಸ್ಥಾಪಿಸಿತ್ತು. ಇಂದಿಗೂ ಆ ದಾಖಲೆಯನ್ನು ಯಾರೂ ಮುರಿದಿಲ್ಲ.
ಇನ್ನು ಪಿಎಸ್ಎಲ್ವಿ-ಸಿ 49 ಯಾನದಲ್ಲಿ ತೆರಳುತ್ತಿರುವ ’ಇ ಒ ಎಸ್-01’ ಒಂದು ಬಗೆಯ ಭೂ ವೀಕ್ಷಣಾ ಉಪಗ್ರಹವಷ್ಟೆ. ಭೂವೀಕ್ಷಣಾ ಉಪಗ್ರಹಗಳನ್ನು ನಿರ್ಮಿಸಿ ಉಡಾಯಿಸಿದ ಅಪಾರವಾದ ಅನುಭವ ಇಸ್ರೋಗೆ ಇದೆ. ಭಾರತದ ಭೂ ವೀಕ್ಷಣಾ ಉಪಗ್ರಹಗಳಿಂದು ದೃವ ಪ್ರದೇಶಗಳ ಮೇಲೆ ಹಾದುಹೋಗುವ ಕಕ್ಷೆಗಳಿಂದ ಹಾಗೂ ಭೂಮಿಯಿಂದ 36,000 ಕಿಲೋ ಮೀಟರ್ ಎತ್ತರದಲ್ಲಿರುವ ದೂರದ ’ಭೂಸ್ಥಿರ ಕಕ್ಷೆ’ಯಿಂದ (ಜಿಯೋ ಸ್ಟೇಷನರಿ ಆರ್ಬಿಟ್) ಅನೇಕ ವಿಧವಾದ ಸೇವೆಯನ್ನು ದೇಶಕ್ಕೆ ಸಲ್ಲಿಸುತ್ತಿವೆ.
ಲೇಖಕರು: ಬಿ.ಆರ್.ಗುರುಪ್ರಸಾದ್, ನಿವೃತ್ತ ವಿಜ್ಞಾನಿ - ಇಸ್ರೋ