ಹೈದರಾಬಾದ್:ಅಮ್ಮ... ಜೀವನದಲ್ಲಿ ಈ ಹೆಸರು ನಾವು ಮೊದಲು ಕೇಳಿರೋದು, ಹೇಳಿರೋದು. ನಾವು ಅತ್ತರೆ ಕಣ್ಣೀರು ಹಾಕೋಳು ಅಮ್ಮ. ನಮಗೆ ನೋವಾದರೆ ನೋವು ಅನುಭವಿಸುವವಳು ಆಕೆ. ಜೀವನದಲ್ಲಿ ನಮಗೆ ಒಲಿಯುವ ಅದ್ಭುತವಾದ ಸಂಬಂಧ ಅವಳೊಂದಿಗಿನದು. ನಿಷ್ಕಲ್ಮಶ ಪ್ರೀತಿಗೆ ಇನ್ನೊಂದು ರೂಪವೇ ಅಮ್ಮ. ನಿನಗೆ ಈ ದಿನ, ತಾಯಂದಿರ ದಿನದ ಶುಭಾಶಯಗಳು.
ಜಾಗತಿಕವಾಗಿ 2 ಲಕ್ಷ ಜೀವಗಳನ್ನು ಬಲಿ ಪಡೆದಿರುವ ಮಾರಣಾಂತಿಕ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಜಗತ್ತಿನಲ್ಲಿ ಮುಂದುವರಿಯುತ್ತಿದೆ. ಈ ಸಂದರ್ಭ ಅನೇಕ ತಾಯಂದಿರು ತಮ್ಮ ಕುಟುಂಬ ಮಾತ್ರವಲ್ಲದೇ ಸಮಾಜದ ಬಗೆಗೂ ತೋರಿದ ಪ್ರೀತಿ, ಆದರ್ಶ, ಧೈರ್ಯ, ದೃಢ ನಿಶ್ಚಯಗಳು ಮಾತೃ ಹೃದಯ ಏನೆಂಬುವುದನ್ನು ಮತ್ತೆ ಜಗತ್ತಿಗೆ ಸಾರಿದೆ.
ಅಮ್ಮನ ಪ್ರೀತಿಯ ಆಳವನ್ನು ತೋರಿರುವ ಕೆಲ ಘಟನೆಗಳು ನಿಮಗಾಗಿ:
- ಅಮ್ಮ ಬೇಕೆಂದು ಅಳುತ್ತಿರುವ ಮಗು ಕಂಡು ಮರುಗಿದ ಕರ್ನಾಟಕದ ನರ್ಸ್
ಬೆಳಗಾವಿಯ ಆಸ್ಪತ್ರೆಯೊಂದರಲ್ಲಿ ನಿಂತಿರುವ ತನ್ನ ತಾಯಿಯನ್ನು ನೋಡಿ ತನ್ನ ತಂದೆಯ ಮೋಟಾರ್ ಸೈಕಲ್ನಲ್ಲಿ ಮುಂದೆ ಕುಳಿತಿದ್ದ ಪುಟ್ಟ ಹುಡುಗಿ ಕೈ ಬೀಸುತ್ತಾ ಅಳುತ್ತಿರುವ ದೃಶ್ಯವನ್ನು ಮೊನ್ನೆ ತಾನೆ ನಾವೆಲ್ಲರೂ ನೋಡಿದ್ದೇವೆ. ಆ ತಾಯಿ ದಾದಿಯಾಗಿದ್ದು, ಅವರು ಕೊರೊನಾ ವಿರುದ್ಧದ ಯುದ್ಧದಲ್ಲಿ ಹೋರಾಟಗಾರ್ತಿಯಾಗಿದ್ದರು. ಆ ಹೋರಾಟ ಗೆಲ್ಲುವ ಪಣ ತೊಟ್ಟಿದ್ದ ಆಕೆ ಮನೆಗೂ ಹೋಗದೆ 15 ದಿನಗಳಿಂದ ಕುಟುಂಬವನ್ನು ತೊರೆದು ಅಜ್ಞಾತಳಾಗಿದ್ದಳು. ಅಸಹಾಯಕ ಆ ತಾಯಿ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗದೆ ಒಳಗೇ ಕುಸಿದಿದ್ದಳು. ಆದರೂ ಆಕೆ ತನ್ನ ಮಗುವನ್ನು ದೂರದಿಂದಲೇ ಕಂಡು ಸಂತೋಷಪಡುವುದು ಕಣ್ಣಂಚನ್ನು ನೀರಾಗಿಸಿತ್ತು.