ನವದೆಹಲಿ: ಭಾರತದಲ್ಲಿ ಕೋವಿಡ್ ಆರ್ಭಟ ನಿಲ್ಲುತ್ತಿಲ್ಲ. ಒಂದೇ ದಿನ 75 ಸಾವಿರ ಜನರಿಗೆ ವೈರಸ್ ಅಂಟಿದ್ದು, ಕೇಸ್ಗಳ ಸಂಖ್ಯೆ 33 ಲಕ್ಷ ಹಾಗೂ ಸಾವಿನ ಸಂಖ್ಯೆ 60 ಸಾವಿರ ಗಡಿ ದಾಟಿದೆ.
ಕಳೆದ 24 ಗಂಟೆಗಳಲ್ಲಿ, ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 75,760 ಸೋಂಕಿತರು ಪತ್ತೆಯಾಗಿದ್ದು, 1,023 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 33,10,235ಕ್ಕೆ ಹಾಗೂ ಮೃತರ ಸಂಖ್ಯೆ 60,472ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 25,23,772 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಉಳಿದಂತೆ 7,25,991 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕೋವಿಡ್ ಟೆಸ್ಟಿಂಗ್ ಅಪ್ಡೇಟ್ಸ್ ಆಗಸ್ಟ್ 26ರ ವರೆಗೆ 3,85,76,510(3.85ಕೋಟಿ) ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 9,24,998 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.