ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ಕೊವಿಡ್​ ನಂತರದ ಜಗತ್ತಿನಲ್ಲಿ ಭಾರತ-ಜಪಾನ್ ಮೈತ್ರಿ ಇನ್ನಷ್ಟು ಪ್ರಗತಿ..?

ಕೊರೊನಾದಿಂದ ಅತಿ ಹೆಚ್ಚು ಬಾಧಿತರಾದ ದೇಶಗಳ ಪೈಕಿ ಜಪಾನ್ 2ನೇ ಸ್ಥಾನಕ್ಕೆ ತಲುಪಿತ್ತು. ಇಂದು ಅದು 36ನೇ ಸ್ಥಾನದಲ್ಲಿ ನಿಂತಿದೆ. ಕೊವಿಡ್ ಪಿಡುಗನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಹತೋಟಿಗೆ ತರುವಲ್ಲಿ ನಿಪ್ಪಾನ್‍ ನಡೆಸಿರುವ ಪಯಣ ಕುತೂಹಲಕಾರಿಯಾಗಿದೆ.

INDIA-JAPAN PARTNERSHIP POST COVID-19
ಕೊವಿಡೋತ್ತರ ಜಗತ್ತಿನಲ್ಲಿ ಭಾರತ-ಜಪಾನ್ ಮೈತ್ರಿ

By

Published : Jun 5, 2020, 2:56 PM IST

ಹೈದರಾಬಾದ್:ಕೊವಿಡ್ ಸೋಂಕಿನ ವಿರುದ್ಧ ಜಪಾನ್ ನಡೆಸುತ್ತಿರುವ ಸಮರ ವಿಶೇಷವಾಗಿದ್ದು ಇತರರಿಗೂ ಮಾದರಿಯಾಗಿದೆ . ಕೊರೊನಾ ವೈರಾಣು ತಂದ ಜಾಗತಿಕ ಪಿಡುಗಿನಿಂದ ತೀವ್ರ ಸಂಕಷ್ಟಕ್ಕೊಳಗಾದ ಚೀನಾ ಹೊರತುಪಡಿಸಿದ ದೇಶಗಳಲ್ಲಿ ಜಪಾನ್ ಕೂಡಾ ಒಂದಾಗಿತ್ತು. ಒಂದು ಹಂತದಲ್ಲಿಯಂತೂ ಕೊರೊನಾದಿಂದ ಅತಿ ಹೆಚ್ಚು ಬಾಧಿತರಾದ ದೇಶಗಳ ಪೈಕಿ ಜಪಾನ್ 2ನೇ ಸ್ಥಾನಕ್ಕೆ ತಲುಪಿತ್ತು. ಇಂದು ಅದು 36ನೇ ಸ್ಥಾನದಲ್ಲಿ ನಿಂತಿದೆ. ಕೊವಿಡ್ ಪಿಡುಗನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಹತೋಟಿಗೆ ತರುವಲ್ಲಿ ನಿಪ್ಪಾನ್‍ ನಡೆಸಿರುವ ಪಯಣ ಕುತೂಹಲಕಾರಿಯಾಗಿದೆ.

ವಿದೇಶಿ ಮಾಧ್ಯಮಗಳಾಗಲೀ, ಅಂತರರಾಷ್ಟ್ರೀಯ ಸೋಂಕು ರೋಗತಜ್ಞರಾಗಲೀ ಜಪಾನಿನ ಪ್ರಯತ್ನವನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿದ್ದಾರೆ. ಕೆಲವು ತಜ್ಞರು ಯಾವ ಮಟ್ಟಕ್ಕೆ ಹೋದರೆಂದರೆ ಬರುವ ಟೋಕಿಯೋ ಓಲಂಪಿಕ್ಸ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಜಪಾನ್ ಸರ್ಕಾರ ನೈಜ ಅಂಕಿ ಅಂಶಗಳನ್ನು ಮರೆಮಾಚಿದೆ ಎಂದೂ ಆರೋಪಿಸಿದರು. ಆದರೆ ಜಪಾನ್‍ನಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ ಅತ್ಯಲ್ಪ ಪ್ರಮಾಣದಲ್ಲಿರುವ ಸಂಗತಿಯೇ ಇಂತಹ ಹುರುಳಿಲ್ಲದ ಆರೋಪಗಳಿಗೆ ಕೊನೆ ಹಾಡಬೇಕು.

ಹೊಕ್ಕಾಯ್ಡೊ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ರಾಜಕೀಯ ವಿಭಾಗದ ಪ್ರಾಧ್ಯಾಪಕರಾಗಿರುವ ಕಾಜುಟೋ ಸುಜುಕಿ ಅವರು ಹೇಳುವಂತೆ ಜಪಾನ್ ದೇಶವು ಸಮೂಹದ ಆಧಾರಿತ ಮಾದರಿಯನ್ನು ಅನುಸರಿಸಿ ಕೊವಿಡ್ ಪಿಡುಗನ್ನು ಎದುರಿಸಿತು. ಸೋಂಕು ರೋಗಗಳ ಕುರಿತ ಇದುವರೆಗಿನ ಅಧ್ಯಯನಗಳ ಆಧಾರದಲ್ಲಿ ಇಂತಹ ಒಂದು ವಿನೂತನ ಮಾದರಿಯನ್ನು ಜಪಾನ್ ರೂಪಿಸಿತ್ತು. ಈ ಮಾದರಿಯ‍ನ್ನು ಮೊದಲಿಗೆ ಫೆ.3ರಂದು ಯೋಕೋಹಾಮಾ ಬಂದರು ಪ್ರವೇಶಿಸಿದ ಡೈಮಂಡ್ ಪ್ರಿನ್ಸರಸ್ ಹಡಗಿನಲ್ಲಿ ಪ್ರಯೋಗಿಸಲಾಯಿತು. ಈ ಮಾದರಿಯಲ್ಲಿ ಸೋಂಕಿನ ಮೂಲವನ್ನು ಪತ್ತೆ ಹಚ್ಚಿ ರೋಗಹರಡುವಿಕೆಯಿಂದ ಪ್ರತ್ಯೇಕಗೊಳಿಸುವ ದೃಷ್ಟಿಯಿಂದ ಗುಂಪುಗಳನ್ನು ಗುರುತಿಸಿ ಪ್ರತಿಯೊಂದು ಗುಂಪನ್ನೂ ತಪಾಸಣೆಗೆ ಒಳಪಡಿಸಲಾಯಿತು. ಈ ಪದ್ಧತಿಯಲ್ಲಿ ಗೊತ್ತುಗುರಿಯಿಲ್ಲದ ಅಥವಾ ರ್ಯಾಂಡಮ್ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ.

ಸೋಂಕಿತರ ಸಂಖ್ಯೆ ಕಡಿಮೆ ಇರುವ ಸನ್ನಿವೇಶಗಳಲ್ಲಿ ಈ ಸಮೂಹ ಮಾದರಿಯ ತಪಾಸಣೆ ಬಹಳ ಯಶಸ್ವಿಯಾಗುತ್ತದಲ್ಲದೆ ಗುಂಪುಗಳನ್ನು ಆರಂಭದಲ್ಲಿಯೇ ಪ್ರತ್ಯೇಕಿಸಿಡಲು ಸಹಾಯವಾಗುತ್ತದೆ. ಹೊಕಾಯ್ಡೋ ಪ್ರದೇಶದಲ್ಲಿ ಈ ಮಾದರಿ ಅನುಸರಿಸುವ ಮೂಲಕ ಜಪಾನ್ ಸರ್ಕಾರವು ಸೋಂಕು ಹರಡುವುದನ್ನು ಹತೋಟಿಗೆ ತಂದಿತು. ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ಮೊತ್ತ ಮೊದಲ ಪ್ರದೇಶವೂ ಇದೇ ಹೊಕ್ಕಾಯ್ಡೋ ಆಗಿತ್ತು ಎಂಬುದು ವಿಶೇಷ.

ಇದರೊಂದಿಗೆ ನಿಪ್ಪಾನ್ ಥ್ರೀ ಸಿ ಮಾದರಿಯನ್ನು ಸಹ ಅಳವಡಿಸಿಕೊಂಡಿದೆ. ಇದರ ಮೂಲಕ ಜನರು ‘ಬೆಳಕಿಂಡಿಯಿಲ್ಲದ ಮುಚ್ಚಟೆ ಜಾಗಗಳಲ್ಲಿ ಹೋಗಬಾರದು, ಬಹಳ ಜನರಿರುವ ಜನಜಂಗುಳಿಗಳ ಜಾಗಗಳಿಗೆ ಹೋಗಬಾರದು ಮತ್ತು ಸನಿಹ-ಸಂಪರ್ಕದ ಜಾಗಗಳಲ್ಲಿ ಹೋಗಬಾರದು ಎಂದು ಕಟ್ಟಳೆ ವಿಧಿಸಲಾಯಿತು. ಸಾಮಾಜಿಕ ಅಂತರ ಕಾಪಾಡುವ ನಿಯಮಗಳ ಜೊತೆಯಲ್ಲಿ ಅಳವಡಿಸಲಾದ ಈ ಮಾದರಿಗಳು ಅಳವಡಿಸಿಕೊಂಡ ಉತ್ತಮ ಪರಿಣಾಮ ಬೀರಲು ಜಪಾನಿನಲ್ಲಿ ಸಾಧ್ಯವಾಯಿತು. ಪ್ರಪಂಚ ಮಟ್ಟದಲ್ಲಿ ಹಲವಾರು ದೇಶಗಳು ಕೈಗೊಂಡ ತೀವ್ರತರದ ಕ್ರಮಗಳಿಂದಾಗಿ ಕೊವಿಡ್ ಸೋಂಕು ಸಧ್ಯ ನಿಯಂತ್ರಣದಲ್ಲಿರುವುರಾದರೂ ಸೋಂಕಿನ ಎರಡನೇ ಅಲೆಯ ಕುರಿತು ತಜ್ಞರು ಆತಂಕಿತರಾಗಿದ್ದಾರೆ. ಆದರೆ ಜಪಾನ್‌ ತನ್ನಲ್ಲಿರುವ ಅತ್ಯಾಧುನಿಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕಾರಣವಾಗಿ ಅದು ಯಾವುದಕ್ಕೂ ಅಳುಕದಂತಿದೆ. ಸಧ್ಯದ ಆರೋಗ್ಯ ಬಿಕ್ಕಟ್ಟು ಪ್ರಪಂಚದಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಲಿರುವುದಂತೂ ದಿಟ.

ಭಾರತವು ಸೋಂಕು ರೋಗವನ್ನು ಎದುರಿಸುವಲ್ಲಿ ನಾಯಕತ್ವ ನೀಡಿದ್ದಷ್ಟೇ ಅಲ್ಲದೇ ಈ ಬಿಕ್ಕಟ್ಟು ತಂದಿತ್ತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿಯೂ ಹಿಂದೆ ಬೀಳಲಿಲ್ಲ. ಚೀನಾವು ಜಪಾನಿನ ಅತಿದೊಡ್ಡ ವ್ಯಾಪಾರಿ ಸಹವರ್ತಿಯಾಗಿದೆ. ಲಾಕ್‌ಡೌನ್ ಕಾಲದಲ್ಲಿ ಚೀನಾ ತನ್ನ ಕಾರ್ಖಾನೆಗಳನ್ನು ಮುಚ್ಚಿಕೊಂಡು ಕುಳಿತಿದ್ದಾಗ ಜಪಾನಿನ ಕೈಗಾರಿಕೋದ್ಯಮಿಗಳಿಗೆ ತೀವ್ರ ಪರಿಣಾಮವುಂಟಾಯಿತು. ಆಗ ಜಪಾನಿಗೆ ತಾನು ಚೀನಾದ ಮೇಲೆ ಅತಿಯಾಗಿ ಅವಲಂಬಿಸಿಕೊಂಡಿರುವುದು ಅರಿವಿಗೆ ಬಂತು. ಕೂಡಲೇ ಅದು ಉತ್ಪಾದನಾ ಚಟುವಟಿಕೆಗಳಿಗೆ ನೀಡುವ ಹೂಡಿಕೆಯನ್ನು ಚೀನಾದಿಂದಾಚೆಗೆ ಸ್ಥಾಳಾಂತರಿಸಲು ಯೋಚಿಸಿದೆ. ನಿಪ್ಪಾನ್ ಸುಮಾರು ೨.೨ ಶತಕೋಟಿ ಡಾಲರುಗಳಷ್ಟು ಮೌಲ್ಯದ ಹೂಡಿಕೆಯನ್ನು ಈ ಉದ್ದೇಶಕ್ಕಾಗಿ ತೆಗೆದಿರಿಸಿರುವುದು ಇಂಡಿಯಾ ಅಂಡ್ ಕೊ. ಪಾಲಿಗಂತೂ ಶುಭಸಮಾಚಾರವೇ ಹೌದು. ಭಾರತ ಮತ್ತು ಜಪಾನುಗಳು ಉತ್ತಮ ದ್ವಿಪಕ್ಷೀಯ ಮೈತ್ರಿ ಸಂಬಂಧ ಹೊಂದಿರುವುದರಿಂದ ಜಪಾನಿನ ಹೊಸ ನಡೆಯಿಂದಾಗಿ ಭಾರತಕ್ಕೆ ದೊಡ್ಡ ಲಾಭವಾಗುವ ಅವಕಾಶವಿದೆ.

ಜಪಾನಿನ ನಡೆಯಿಂದ ಅತಿ ಹೆಚ್ಚು ಲಾಭ ಗಳಿಸಲಿರುವ ದೇಶಗಳೆಂದರೆ ಇಂಡಿಯಾ, ಥೈಲ್ಯಾಂಡ್, ವಿಯೆಟ್ನಾಂ ಮತ್ತು ಬಾಂಗ್ಲಾದೇಶಗಳಾಗಿವೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಭಾರತವು ಇಲ್ಲಿ ಸುಗಮ ಉದ್ಯಮ ಸ್ಥಾಪನೆಯ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಬೇಕಿದೆ. ಜಪಾನೀಯರು ಬೇರೆಯದೇ ಉದ್ಯಮ ಸಂಸ್ಕಾರ ಹೊಂದಿದ್ದು ಬಹಳ ಸೂಕ್ಷ ಮನಸ್ಥಿತಿ ಹೊಂದಿರಲು ಸಾಧ್ಯವಿದೆ. ಅವರ ಸಂಸ್ಕೃತಿಯನ್ನು ಸಂಪೂರ್ಣ ಅರಿಯುವುದು ಸುಲಭದ ಮಾತಲ್ಲ. ಆದರೆ ನೀತಿ ನಿರೂಪಣೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಯೋಚಿಸಿ ಅದರಂತೆ ಯೋಜಿಸಿದಲ್ಲಿ ಕೊವಿಡೋತ್ತರ ಜಗತ್ತಿನಲ್ಲಿ ಭಾರತ-ಜಪಾನ್ ಸಂಬಂಧಗಳಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣಲು ಸಾದ್ಯವಿದೆ.

ABOUT THE AUTHOR

...view details