ಹೈದರಾಬಾದ್: ಇಂಧನ ಸಂಪನ್ಮೂಲದಲ್ಲಿ ಶ್ರೀಮಂತವಾಗಿರುವ ಮಧ್ಯ ಏಶಿಯಾದ ದೇಶಗಳಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತವು ಈ ದೇಶಗಳಿಗೆ ಅತಿ ಸನಿಹದ ವಾಣಿಜ್ಯ ಮಾರ್ಗಗಳನ್ನು ಶೋಧಿಸುವಲ್ಲಿ ಎಂದಿಗೂ ಉತ್ಸಾಹ ತೋರುತ್ತಾ ಬಂದಿದೆ. ಈ ದಿಸೆಯಲ್ಲಿ ಇರಾನ್ ದೇಶವು ತಾನು ಹೊಂದಿರುವ ಭೌಗೋಳಿಕ ಸ್ಥಾನದ ಕಾರಣದಿಂದಾಗಿ ಭಾರತದ ಮಟ್ಟಿಗೆ ಒಂದು ಸಹಜ ಸಹಭಾಗಿಯಾಗಿದೆ.
ಚಾಬಾಹಾರ್ ಬಂದರಿನ ಮೂಲಕ ಏರ್ಪಟ್ಟ ಎರಡೂ ದೇಶಗಳ ನಡುವಿನ ವಾಣಿಜ್ಯ ಸಂಬಂಧಗಳು ಭಾರತವನ್ನು ಮಧ್ಯ ಏಶಿಯಾದ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿವೆ. ಹೀಗಾಗಿ ಭಾರತವು ಪಾಕಿಸ್ತಾನವನ್ನು ಆಶ್ರಯಿಸಿಕೊಳ್ಳದೇ ಅಫ್ಘಾನಿಸ್ತಾನದ ಮೂಲಕ ವಾಣಿಜ್ಯ ಮಾರ್ಗವನ್ನು ಸ್ಥಾಪಿಸಲು ಬಯಸಿದೆ. ಇದು ಸಾಧ್ಯವಾಗುವುದು ಚಾಬಾಹಾರ್ ಮೂಲಕ ಮಾತ್ರ. ಏಕೆಂದರೆ ಇರಾನ್ ಮತ್ತು ಅಫ್ಘಾನಿಸ್ತಾನಗಳು ಭೂಮಾರ್ಗದ ಮೂಲಕ ಸಂಪರ್ಕ ಹೊಂದಿವೆ.
ಇರಾನ್ ಮತ್ತು ಭಾರತಗಳು ಸಮುದ್ರ ಮತ್ತು ವಾಯುಯಾನದ ಮೂಲಕ ಮಾತ್ರವೇ ಪರಸ್ಪದ ಸಂಪರ್ಕ ಹೊಂದಿವೆ. ಅಫ್ಘಾನಿಸ್ತಾನವು ಒಂದು ಭೂಬಂಧಿತ ದೇಶ. ಅದು ಸರಕುಗಳ ರಫ್ತಿಗಾಗಿ ಹೆಚ್ಚಿನಂಶ ಪಾಕಿಸ್ತಾನವನ್ನೇ ಅವಲಂಬಿಸಿದೆ. ಈಗ ಅದೂ ಸಹ ಬೇರೆ ಬೇರೆ ವ್ಯಾಪಾರ ಮಾರ್ಗಗಳನ್ನು ಸ್ಥಾಪಿಸಿಕೊಳ್ಳುವ ಮೂಲಕ ಪಾಕಿಸ್ತಾನದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆಗೊಳಿಸಲು ಬಯಸಿದೆ.
ಆದರೆ ಅಫ್ಘಾನಿಸ್ತಾನದ ಉತ್ತರದ ಪ್ರದೇಶಗಳಲ್ಲಿ ಒಂದು ದಂತಕತೆಯಾಗಿ ಜನಪ್ರಿಯ ಇರಾನಿನ ಜನರಲ್ ಆಗಿಯೂ, ಇಸ್ಲಾಮಿಕ್ ರೆವಲೂಶನರಿ ಗಾರ್ಡ್ಸ್ ನ (IRG) ವಿದೇಶಾಂಗ ಸೇನಾ ವಿಭಾಗವಾಗಿದ್ದ ಖುದ್ಸ್ ಪೋರ್ಸ್‍ನ ಮುಖ್ಯಸ್ಥರೂ ಆಗಿದ್ದ ಖಾಸಿಮ್ ಸುಲೇಮಾನಿಯವರ ಮರಣದ ನಂತರದಲ್ಲಿ ಬೇರೆ ಬೇರೆ ವ್ಯಾಪಾರ ಮಾರ್ಗಗಳಿಗಾಗಿ ಅಫ್ಘಾನಿಸ್ತಾನ ನಡೆಸುತ್ತಿದ್ದ ಬೇಟೆ ಕೊನೆಗೊಂಡಿದೆ.
ಮೂರು ದೇಶಗಳ ನಡುವೆ ಬಂದರಿನ ಮೂಲಕ ವ್ಯಾಪಾರ ಸಂಬಂಧಗಳನ್ನು ಬೆಳೆಸುವಲ್ಲಿ ಸುಲೇಮಾನಿ ಮಹತ್ತರ ಪಾತ್ರ ವಹಿಸಿದ್ದರು. ಅಫ್ಘಾನಿಸ್ತಾನದ ಶಿಯಾ ಅಲ್ಪಸಂಖ್ಯಾತ ಸಮುದಾಯವಾದ ಹಜಾರಾಗಳ ನಡುವೆ ಅವರು ಬಹಳ ಜನಪ್ರಿಯರಾಗಿದ್ದರು. ಈ ಸಮಯದಾಯವೇ ಈ ವ್ಯಕ್ತಿಯನ್ನು ಇರಾನ್ ಮತ್ತು ಇಂಡಿಯಾಗಳೊಂದಿಗೆ ಕೈ ಜೋಡಿಸುವವಲ್ಲಿ ಅಫ್ಘಾನಿಸ್ತಾನದ ನಾಯಕತ್ವವನ್ನು ಮನವೊಲಿಸಬಲ್ಲ ನಾಯಕನನ್ನಾಗಿ ಮಾಡಿದ್ದು. ಹೈದರಾಬಾದ್‍ನಲ್ಲಿನ ಇರಾನಿ ರಾಯಭಾರ ಕಚೇರಿಯ ಜನರಲ್ ಮತ್ತು ರಾಯಭಾರಿಯಾಗಿರುವ ಮೊಹಮದ್ ಹಗ್ಬಿನ್ ಘೋಮಿ ಅವರು ಈ ಲೇಖಕನೊಂದಿಗೆ ಮಾತನಾಡುತ್ತಾ, “ಇಡೀ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿ ಮೂರೂ ದೇಶಗಳನ್ನು ಒಟ್ಟಿಗೆ ತಂದಿದ್ದೇ ಖಾಸಿಮ್ ಅವರಾಗಿದ್ದರು” ಎಂದರು.
ಅಮೆರಿಕವು ನಿಷೇಧಿಸಿರುವ IRG ವಿಷಯದಲ್ಲಿ ಭಾರತ ಹೊಯ್ದಾಟದ ನಿಲುವು ಹೊಂದಿತ್ತು. ಅದರೊಂದಿಗೆ ತೀರಾ ಸನಿಹದ ಸಂಬಂಧ ಏರ್ಪಡಿಸಿಕೊಂಡರೆ ಅಮೆರಿಕದೊಂದಿಗಿನ ಸಂಬಂಧಗಳು ಕೆಡುತ್ತಿದ್ದವು. ವ್ಯಾಪಾರ, ವಹಿವಾಟುಗಳ ಕುರಿತ ಬೆಳವಣಿಗೆಗಳಲ್ಲಿ ಖಾಸಿಮ್ ಅವರು ಭಾಗವಹಿಸುತ್ತಿದ್ದುದು ಎಲ್ಲೂ ಪ್ರಚಾರ ಪಡೆದುಕೊಂಡಿರಲಿಲ್ಲ. ಪಾಕಿಸ್ತಾನದ ಗವಾಧಾರ್ ಬಂದರಿನಿಂದ 68 ಕಿಲೋಮೀಟರ್ ದೂರದಲ್ಲಿರುವ ಚಾಬಾಹಾರ್ ಬಂದರು ಸಿಸ್ತನ್ ಪ್ರಾಂತ್ಯದಲ್ಲಿದೆ. ಅಫ್ಘಾನಿಸ್ತಾನಕ್ಕೆ ಪ್ರಮುಖ ಆಕರ್ಷಣೆಯೇ ಇದಾಗಿತ್ತು. ಏಕೆಂದರೆ ಭಾರತ-ಇರಾನ್ ಮತ್ತು ಅಫ್ಘಾನಿಸ್ತಾನ್ ಗಳ ನಡುವೆ ಜರುಗಿದ ಒಪ್ಪಂದದ ಪ್ರಕಾರ ಅಫ್ಘಾನಿಸ್ತಾನವು ಈ ಬಂದರನ್ನು ಬಳಸಿಕೊಳ್ಳಲು ಭಾರತಕ್ಕೆ ಅತ್ಯಂತ ಕನಿಷ್ಟ ಮೊತ್ತವನ್ನು ನೀಡಿದರೆ ಸಾಕಾಗುತ್ತಿತ್ತು.
ಈ ಬಂದರಿನ ಮೂಲಕ ಭಾರತವು ಪಾಕಿಸ್ತಾನವನ್ನು ಅವಲಂಬಿಸದೇ ಅಫ್ಘಾನಿಸ್ತಾನ ಮತ್ತು ಇರತೆ ಮಧ್ಯ ಏಶಿಯಾದ ದೇಶಗಳಿಗೆ ಪ್ರವೇಶ ಸಂಪರ್ಕ ಹೊಂದಬಹುದಾಗಿತ್ತು. ಮಾತ್ರವಲ್ಲದೆ ಇದರಿಂದ ಅಫ್ಘಾನಿಸ್ತಾನವು ಬೇರೊಂದು ಮಾರ್ಗದ ಮೂಲಕ ತನ್ನ ಸರಕುಗಳನ್ನು ಸಾಗಿಸಬಹುದಾದ್ದರಿಂದ ಪಾಕಿಸ್ತಾನದ ಮೇಲೆ ಅಫ್ಘಾನಿಸ್ತಾನದ ಅವಲಂಬನೆಯನ್ನೂ ತಪ್ಪಿಸಲಿತ್ತು.
ಒಂದು ದಶಕದ ಹಿಂದೆ ಚಾಬಾಹಾರ್ ಮತ್ತು ಅಫ್ಘಾನಿಸ್ತಾನಗಳ ನಡುವೆ ರಸ್ತೆ ಸಂಪರ್ಕವನ್ನು ಏರ್ಪಡಿಸಲಾಗಿದೆ. ಇದು ದೇಶದ ದಕ್ಷಿಣ ಭಾಗದಲ್ಲಿರುವ ಹೇರಾಟ್ ಮತ್ತು ಕಂದಾಹಾರ್‍ಗಳಿಗೆ ಸಂಪರ್ಕ ಏರ್ಪಡಿಸುತ್ತದೆ. ಈ ರಸ್ತೆಯು ಕಾಬೂಲ್ ಮತ್ತು ಹಜಾರಾಗಳಿರುವ ದೇಶದ ಉತ್ತರ ಭಾಗಗಳಿಗೂ ಸಂಪರ್ಕವೇರ್ಪಡಿಸುತ್ತದೆ. ಚಾಬಾಹಾರ್ ನಿಂದ ಅಫ್ಗಾನಿಸ್ತಾನದ ವರೆಗೆ ನಿರ್ಮಿಸಲು ಉದ್ದೇಶಿಸಲಾಗಿದ್ದ ರೈಲು ಮಾರ್ಗವು ಅಫ್ಘಾನಿಸ್ತಾನ, ಇರಾನ್ ಮತ್ತು ಭಾರತಗಳಿಗೆ ಸಮವಾಗಿ ಲಾಭದಾಯಕವಾಗಿತ್ತು.