ಕರ್ನಾಟಕ

karnataka

ETV Bharat / bharat

ಎರಡೇ ವರ್ಷಗಳಲ್ಲಿ ಮೋದಿ ಸಂಪುಟದ ನಾಲ್ವರು ಅಸ್ತಂಗತ..! ಏನಿದು ವಿಧಿಯಾಟ - modi cabinet

ಪ್ರಧಾನಿ ಮೋದಿ ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದ ಅನಂತ್​ಕುಮಾರ್​, ಮನೋಹರ್​ ಪರಿಕ್ಕರ್​, ಸುಷ್ಮಾ ಸ್ವರಾಜ್​, ಅರುಣ್​ ಜೇಟ್ಲಿ ಅವರು ಕೇವಲ ಎರಡೇ ವರ್ಷದಲ್ಲಿ ಅಸ್ತಂಗತರಾಗಿದ್ದಾರೆ.

just two years 4 ministers died in modi cabinet

By

Published : Aug 24, 2019, 7:16 PM IST

Updated : Aug 24, 2019, 7:30 PM IST

ಹೈದರಾಬಾದ್​: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಸಂಪುಟದಲ್ಲಿ ಸಚಿವರಾಗಿದ್ದ ನಾಲ್ವರು ಕೇವಲ ಎರಡೇ ವರ್ಷಗಳಲ್ಲಿ ನಿಧನವಾಗಿದ್ದು ಕಾಕತಾಳೀಯ.

ಅನಂತ್​ಕುಮಾರ್​, ಮನೋಹರ್​ ಪರಿಕ್ಕರ್​, ಸುಷ್ಮಾ ಸ್ವರಾಜ್​, ಅರುಣ್​ ಜೇಟ್ಲಿ ಅವರ ಸಾವು ಬಿಜೆಪಿಗೆ ಅಪಾರ ನಷ್ಟ ತಂದೊಡ್ಡಿದೆ. ಬಿಜೆಪಿ ಕಟ್ಟಲು ಈ ಮಹನೀಯರ ಶ್ರಮ ಅಷ್ಟಿಷ್ಟಲ್ಲ. ಇವರು ಮೋದಿಗೂ ಮೊದಲೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಾಯಕರಾಗಿದ್ದರು.

ಎಚ್​.ಎನ್​.ಅನಂತ್ ​ಕುಮಾರ್

ಮೋದಿ ಸರ್ಕಾರದಲ್ಲಿ ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದ ಕರ್ನಾಟಕ ಮೂಲದ ಎಚ್​.ಎನ್​.ಅನಂತ್​ ಕುಮಾರ್​ ಅವರು 2018ರ ನವೆಂಬರ್​ 12ರಂದು ನಿಧನರಾಗಿದರು. ಇವರು ಆರು ಬಾರಿ ಸಂಸತ್ ಸದಸ್ಯರಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಪ್ರವಾಸೋದ್ಯಮ ಇಲಾಖೆ ಸಚಿವ (ಹೆಚ್ಚುವರಿ), ಕೇಂದ್ರ ವಿಮಾನ ಯಾನ ಸಚಿವ, ಸಂಸ್ಕೃತಿ, ಯುವಜನ ಮತ್ತು ಕ್ರೀಡಾ ಸಚಿವ, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ, ಗ್ರಾಮೀಣಾಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಜಯನಗರ ವಿಧಾನಸಭೆ ಚುನಾವಣೆ ವೇಳೆಯೇ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಬಂದರು. ಹೀಗಾಗಿ ಅವರು ಸಂಸತ್​ ಅಧಿವೇಶನಕ್ಕೂ ಗೈರಾಗಿದ್ದರು. ಹೀಗಿದ್ದರೂ ಚಿಕಿತ್ಸೆ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಆದರೆ ಅವರು ಬದುಕುಳಿಯಲಿಲ್ಲ.

ಮನೋಹರ್ ಪರಿಕ್ಕರ್

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್​ (63) ಅವರು ಇದೇ ಮಾರ್ಚ್​​ 17ರಂದು ಪಣಜಿಯಲ್ಲಿ ತಮ್ಮ ಮಗನ ನಿವಾಸದಲ್ಲಿ ಅಗಲಿದರು. ಇವರು ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. 2018 ಫೆಬ್ರವರಿಯಲ್ಲೇ ಹೆಚ್ಚಿನ ಚಿಕಿತ್ಸೆಗಾಗಿ ವಾಷಿಂಗ್ಟನ್​​ ಆಸ್ಪತ್ರೆಗೆ ದಾಖಲಾಗಿದ್ದ ಪರಿಕ್ಕರ್​ ಅಲ್ಪ ಗುಣಮುಖರಾಗಿ ವಾಪಸ್​ ಆಗಿದ್ದರು. ಆದರೂ ಆರೋಗ್ಯ ಸುಧಾರಿಸಿದ್ದರಿಂದ ಮತ್ತೊಂದು ಬಾರಿ ಕಾನ್ಸರ್​ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿಂದ ಬಂದ ಬಳಿಕ ಕೆಲ ಕಾಲ ರಾಜಕೀಯದಲ್ಲಿ ಸಕ್ರೀಯರಾದರೂ ತುಂಬಾ ಬಳಲಿದ್ದರು. ವೆಂಟಿಲೇಟರ್​ ಮೂಲಕವೇ ಆಡಳಿತ ನಡೆಸಿದರು. ಆ ಬಳಿಕ ಏಮ್ಸ್​​ನಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದರು. ಏಮ್ಸ್​​ನಲ್ಲೇ ಗೋವಾ ಸಚಿವ ಸಂಪುಟ ಸಭೆ ನಡೆಸಿ ಗಮನ ಸೆಳೆದರು.ಗೋವಾ ಮುಖ್ಯಮಂತ್ರಿ ಆಗುವುದಕ್ಕಿಂತ ಮುಂಚೆ ಕೇಂದ್ರ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ಗೋವಾದಲ್ಲಿ ಬಿಜೆಪಿ ಉಳಿಸಿಕೊಳ್ಳಲು ಮತ್ತೆ ರಾಜ್ಯ ರಾಜಕೀಯಕ್ಕೆ ಮರಳಿದ ಪರಿಕ್ಕರ್​ ಪಕ್ಷಕ್ಕೆ ಬಹುಮತ ದೊರೆಯದಿದ್ದರೂ ಇತರರ ಬೆಂಬಲ ಪಡೆದು ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದರು. ಈ ಕಾರಣದಿಂದ ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸುಷ್ಮಾ ಸ್ವರಾಜ್​

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್​ (67) ಅವರು ಇದೇ ತಿಂಗಳು ಆಗಸ್ಟ್​​ 6ರಂದು ಮೃತಪಟ್ಟರು. ಸುಷ್ಮಾ ಸ್ವರಾಜ್‌ ಅವರಿಗೆ ಹೃದಯಾಘಾತವಾಗಿದ್ದರಿಂದಾಗಿ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು. ಸುಷ್ಮಾ ಸ್ವರಾಜ್​ ಸಹ ಮೋದಿ ಸರ್ಕಾರದಲ್ಲಿ ವಿದೇಶಾಂಗ ಖಾತೆಯನ್ನ ಸಮರ್ಥವಾಗಿ ಮುನ್ನಡೆಸಿದ್ದರು. ಇವರು ಸಹ 2018 ರಲ್ಲೇ ಅನಾರೋಗ್ಯಕ್ಕೆ ಒಳಗಾಗಿ ಇವರು ಸಹ ಅಮೆರಿಕಾದಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದರು. ಹೀಗಿದ್ಯಾಗೂ ಅವರು ತಮ್ಮ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಸಾವಿನ ಬಗ್ಗೆ ಮೊದಲೇ ಗೊತ್ತಿದ್ದರಿಂದಲೋ ಏನೋ ತಾವು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಚುನಾವಣೆಗೆ ಮೊದಲೇ ಘೋಷಣೆ ಮಾಡಿದ್ದರು. ಅಂತೆಯೇ ಅವರು ಸಹಜವಾಗಿ ಮೋದಿ -2 ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಲಿಲ್ಲ.1996ರಲ್ಲಿ ವಾಜಪೇಯಿ ಸಂಪುಟದಲ್ಲಿ ಸಚಿವೆಯಾಗಿದ್ದರು. ಅಲ್ಲದೆ, 1998ರಲ್ಲಿ ದೆಹಲಿಯ ಮುಖ್ಯಮಂತ್ರಿಯಾಗಿಯೂ ಆಗಿ ಸೇವೆ ಸಲ್ಲಿಸಿದ್ದರು. 1999ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಸೋನಿಯಾ ವಿರುದ್ಧ ಸ್ಪರ್ಧಿಸಿದ್ದರು. 2014ರ ಮೋದಿ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿದ್ದರು. ಸ್ವಸಾಮಾರ್ಥ್ಯದಿಂದ ರಾಜಕೀಯಕ್ಕೆ ಬಂದ ಅವರು, ಅತಿ ಕಿರಿಯ ವಯಸ್ಸಿನಲ್ಲೇ ಶಾಸಕಿಯಾಗಿದ್ದ ಹೆಗ್ಗಳಿಕೆ ಅವರದು.

ಅರುಣ್​ ಜೇಟ್ಲಿ

ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ಮುಖಂಡ, ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್‌ ಜೇಟ್ಲಿ (66) ಆಗಸ್ಟ್​ 24ರಂದು ಶನಿವಾರ ಅಸ್ತಂಗತರಾದರು. ಅವರಿಗೆ ನಿಶ್ಯಕ್ತಿ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಇದೇ ಆಗಸ್ಟ್‌ 9ರಂದು ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಜೇಟ್ಲಿ ಆರೋಗ್ಯದಲ್ಲಿ ಏರು-ಪೇರಾಗಿದ್ದ ಕಾರಣ 2019ರ ಲೋಕಸಭಾ ಚುನಾವಣೆ ಪ್ರಚಾರದಿಂದಲೇ ಹಿಂದೆ ಸರಿದಿದ್ದರು. ಇವರು ಸಹ 2018 ರ ಅಕ್ಟೋಬರ್​​​ನಲ್ಲೇ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದು ವಾಪಸ್​ ಆಗಿದ್ದರು. ಇದೇ ಕಾರಣದಿಂದ ಮೋದಿ ಸರ್ಕಾರ 303 ಸೀಟುಗಳನ್ನು ಪಡೆದು ಏಕಾಂಗಿಯಾಗಿ ಎರಡನೇ ಬಾರಿ ಅಧಿಕಾರಕ್ಕೆ ಏರಿದಾಗ ಸಹಜವಾಗೇ ಅರುಣ್​ ಜೇಟ್ಲಿ ಅವರು ಸಚಿವರಾಗಲಿದ್ದಾರೆ ಎಂದೇ ಎಲ್ಲರೂ ನಂಬಿದ್ದರು. ಆದರೆ ಸ್ವತಃ ಅರುಣ್​ ಜೇಟ್ಲಿ ಅನಾರೋಗ್ಯಕ್ಕೆ ಈಡಾಗಿರುವುದರಿಂದ ತಮಗೆ ವಿಶ್ರಾಂತಿಬೇಕು. ತಮಗೆ ಅನುಮತಿ ನೀಡಿ, ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಡಿ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದರು. ಪ್ರಧಾನಿ ಮೋದಿ ಜೇಟ್ಲಿ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದರು. ಅವರಿಗೆ ಈ ಬಗ್ಗೆ ಮೊದಲೇ ಗೊತ್ತಿತ್ತೋ ಏನೋ ಸಚಿವ ಪದವಿಗೆ ಒಲ್ಲೆ ಎಂದು ಬಿಟ್ಟಿದ್ದರು. ಹೀಗಾಗಿ ಅವರ ಸಲಹೆಯಂತೆ ನಿರ್ಮಲಾ ಸೀತಾರಾಮನ್​ ಅವರಿಗೆ ವಿತ್ತ ಖಾತೆ ನೀಡಿದ್ರು ಎಂದು ಹೇಳಲಾಗುತ್ತಿದೆ.

ಮಾಹಿತಿ ಮತ್ತು ಪ್ರಸಾರ ಇಲಾಖೆ ರಾಜ್ಯ ಸಚಿವ, ಅಭಿವೃದ್ಧಿ ಮತ್ತು ಹೂಡಿಕೆ ಇಲಾಖೆ ರಾಜ್ಯ ಸಚಿವ, ರಾಜ್ಯಸಭೆಗೆ ಆಯ್ಕೆ, ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ, ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವ, ಸಾಗರಯಾನ ಖಾತೆ ಸಚಿವ, ಕಾನೂನು ಮತ್ತು ನ್ಯಾಯ ಸಚಿವ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಹಾಗೂ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಹಣಕಾಸು ಸಚಿವರಾಗಿದ್ದಾಗ ₹ 500, ₹ 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ₹ 500 ರೂ ₹ 2000 ಮುಖಬೆಲೆಯ ಹೊಸ ನೋಟುಗಳನ್ನು ಜಾರಿಗೆ ತಂದರು. ಈ ಮೂಲಕ ಭ್ರಷ್ಟಾಚರ ಮತ್ತು ಕಪ್ಪುಹಣ ವಿರುದ್ಧದ ಹೋರಾಟಕ್ಕೆ ಮುಂದಡಿ ಇಟ್ಟಿದ್ದರು. ಅಲ್ಲದೆ, ಕರ್ನಾಟಕದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಕಾರಣರಾಗಿದ್ದರು.

ಸುಷ್ಮಾ ಸ್ವರಾಜ್​, ಅನಂತ್ ಕುಮಾರ್ ಅವರು ಎಲ್​.ಕೆ.ಅಡ್ವಾಣಿ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಆತ್ಮೀಯತೆಯಿಂದ ಇದ್ದರು. ಅದೇ ಕಾರಣಕ್ಕಾಗಿಯೇ ಮೋದಿ ಅವರು ಪ್ರಧಾನಿಯಾದ ಬಳಿಕ ಅನಂತ್​ಕುಮಾರ್ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ರಾಜಕೀಯ ವಲಯದಲ್ಲಿ ಅನಂತ್ ಕುಮಾರ್ ಅವರನ್ನು ಅಡ್ವಾಣಿ ಅವರ ಮಾನಸಪುತ್ರ ಎಂದೇ ಕರೆಯಲಾಗುತ್ತಿತ್ತು.

ಅನಂತ್​ ಕುಮಾರ್ ಹಾಗೂ ಸುಷ್ಮಾ ಸ್ವರಾಜ್​ ತಮ್ಮ ಕೆಲಸಗಳಿಂದಲೇ ಮೋದಿ ಅವರ ಮನ ಗೆದ್ದಿದ್ದರು. ಬಳಿಕ ಆತ್ಮೀಯರು ಆಗಿದ್ದರು. ಇನ್ನು ಮನೋಹರ್ ಪರಿಕ್ಕರ್​ ಹಾಗೂ ಅರುಣ್​ ಜೇಟ್ಲಿ ಮೊದಲಿನಿಂದಲೂ ಪ್ರಧಾನಿ ಮೋದಿಗೆ ಆತ್ಮೀಯರೇ ಆಗಿದ್ದರು.

ಪ್ರಧಾನಿಯಾಗಲು ಮೋದಿಗೆ ಜೇಟ್ಲಿ ಅವರ ಸಹಕಾರ ಇತ್ತು.. ಇದಕ್ಕೆ ಪರಿಕ್ಕರ್​ ಸಹ ಹೊರತಾಗಿರಲಿಲ್ಲ. ಮೊದಲ ಮೋದಿ ಸರ್ಕಾರದಲ್ಲಿ ಮಹತ್ವದ ಭೂಮಿಕೆ ನಿರ್ವಹಿಸಿದ್ದ, ಪ್ರಧಾನಿ ಬೆನ್ನೆಲುಬಾಗಿ ನಿಂತ ನಾಲ್ವರು ಮೆದಾವಿಗಳು ಇನ್ನಿಲ್ಲ.. ಇಂತಹ ನಾಯಕರನ್ನ ಕಳೆದುಕೊಂಡ ಬಿಜೆಪಿ ಬಡವಾಗಿದೆ.

Last Updated : Aug 24, 2019, 7:30 PM IST

ABOUT THE AUTHOR

...view details