ನವದೆಹಲಿ: ಅಧಿಕಾರದ ವಿಚಾರವಾಗಿ ಉದ್ಭವವಾಗಿದ್ದ ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟ ಬಗೆಹರಿಸಲು ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠ ಅಧಿಕಾರ ಹಂಚಿಕೆ ಸೂತ್ರ ಅನುಸರಿಸಿದೆ.
ದೆಹಲಿ ಸರ್ಕಾರ v/s ಕೇಂದ್ರ ಸರ್ಕಾರದ ಜಿದ್ದಾಜಿದ್ದಿ ಕುರಿತಾಗಿ ಸುಪ್ರೀಂನ ನ್ಯಾ. ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರ ಪೀಠ ಇಂದು ವಿಚಾರಣೆ ನಡೆಸಿತು. ಅದರಂತೆ, ಸರ್ಕಾರದ ಜಂಟಿ ಕಾರ್ಯದರ್ಶಿ ಹಾಗೂ ಅವರ ಮೇಲಿನ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ಗಿದೆ. ಉಳಿದಂತೆ ಇತರೆ ಅಧಿಕಾರಿಗಳನ್ನು ದೆಹಲಿ ಸರ್ಕಾರ ನೋಡಿಕೊಳ್ಳುತ್ತೆ. ದೆಹಲಿ ಆಡಳಿತದ ಅಧಿಕಾರಿಗಳ ನೇಮಕ, ಹುದ್ದೆ ಹಾಗೂ ವರ್ಗಾವಣೆಯ ಕಾರ್ಯಗಳು ದೆಹಲಿ ಸರ್ಕಾರದ ಜವಬ್ದಾರಿ ಎಂದಿದೆ. ಜತೆಗೆ ಎಸಿಬಿ ಸಂಸ್ಥೆಯ ಮೇಲೆ ಒಟ್ಟಾರೆ ನಿಯಂತ್ರಣ ಕೇಂದ್ರದ್ದೇ ಎಂದು ಒಪ್ಪಿಕೊಂಡಿದೆ.
ಮೂರು ತಿಂಗಳ ಹಿಂದೆ ಸಲ್ಲಿಕೆಯಾಗಿದ್ದ 9 ಅರ್ಜಿಗಳ ವಿಚಾರಣೆಯನ್ನು ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. ಎಸಿಬಿ, ತನಿಖಾ ಆಯೋಗ ರಚನೆ ಕೇಂದ್ರದ ಜವಾಬ್ದಾರಿ. ವಿದ್ಯುತ್, ಸರ್ಕಾರಿ ವಕೀಲರ ನೇಮಕಾತಿ, ಕೃಷಿ ಭೂಮಿ ಬೆಲೆ ನಿಗಧಿ ದೆಹಲಿ ಸರ್ಕಾರದ ಜವಾಬ್ದಾರಿ ಎಂದು ಹೇಳಿದೆ. ದೆಹಲಿ ಸೇವೆಗಳನ್ನು ಯಾರ ವ್ಯಾಪ್ತಿಗೆ ತರಬೇಕು ಎಂಬ ಬಗ್ಗೆ ಸುಪ್ರೀಂನ ಬೃಹತ್ ಪೀಠ ನಿರ್ಧರಿಸಬೇಕು ಎಂದಿದೆ. ಜತೆಗೆ ಜನರ ಒಳಿತಿಗಾಗಿ ಎರಡೂ ಚುನಾಯಿತ ಸರ್ಕಾರಗಳು ಹಾಗೂ ಲೆಫ್ಟಿನೆಂಟ್ ಗವರ್ನರ್ ಪರಸ್ಪರ ಗೌರವದಿಂದ ಕೆಲಸ ಮಾಡಬೇಕು ಎಂದು ಕಿವಿಹಿಂಡಿ ಹೇಳಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಅಧಿಕಾರಗಳನ್ನು ಕಿತ್ತುಕೊಂಡು, ದಬ್ಬಾಳಿಕೆ ನಡೆಸುತ್ತಿದೆ ಎಂದು ಸಿಎಂ ಅರವಿಂದ ಕೇಜ್ರವಾಲ್ ಅವರು ಆರೋಪಿಸಿದ್ದರು. ರಾಜ್ಯ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವೆ ನಡೆಯುತ್ತಿದ್ದ ಸಂಘರ್ಷ ಸುಪ್ರೀಂ ಮೆಟ್ಟಿಲು ಏರಿತ್ತು. ಇದೀಗ ಸುಪ್ರೀಂ ತೀರ್ಪಿನ ಮೂಲಕ ಅಧಿಕಾರ ವಿಭಜನೆ ಮಾಡಿದೆ.