ನವದೆಹಲಿ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸಿದ್ಧರಾಗಿದ್ದು, ಸಮಾರಂಭಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರದ ಮೂಲಕ ಉದ್ಧವ್ ಠಾಕ್ರೆಗೆ ತಿಳಿಸಿದ್ದಾರೆ.
ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಪಕ್ಷಗಳು ಸೇರಿ ಮಾಡಿಕೊಂಡಿರುವ ಮೈತ್ರಿಕೂಟ ‘ಮಹಾ ವಿಕಾಸ ಅಘಾಡಿ’ ಸರ್ಕಾರ ರಚನೆಗೆ ವೇದಿಕೆ ಸಜ್ಜಾಗಿದೆ. ಮೈತ್ರಿಕೂಟದ ನಾಯಕನಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯನ್ನು ಆಯ್ಕೆ ಮಾಡಲಾಗಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಉದ್ಧವ್ ಠಾಕ್ರೆ ಸಿದ್ಧರಾಗಿದ್ದಾರೆ.
"ದೇಶವು ಬಿಜೆಪಿಯಿಂದ ಹಿಂದೆಂದೂ ಕಂಡಿಲ್ಲದ ಬೆದರಿಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಸಾಕಷ್ಟು ಅಸಾಧಾರಣ ಸನ್ನಿವೇಶಗಳ ಅಡಿ ಒಂದಾಗಿವೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಾನು ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ವಿಷಾದಿಸುತ್ತೇನೆ" ಎಂದು ಪತ್ರದಲ್ಲಿ ಸೋನಿಯಾ ತಿಳಿಸಿದ್ದಾರೆ.
"ದೇಶದ ರಾಜಕೀಯ ವಾತಾವರಣ ವಿಷಕಾರಿಯಾಗಿದೆ, ಆರ್ಥಿಕತೆ ನೆಲಕಚ್ಚಿದೆ. ರೈತರು ನರಕಯಾತನೆ ಅನುಭವಿಸುತ್ತಿದ್ದಾರೆ. ಮಹಾರಾಷ್ಟ್ರ ಜನತೆ, ಈ ಮೈತ್ರಿ ಪಕ್ಷದ ಸರ್ಕಾರದಿಂದ ಪಾರದರ್ಶಕ, ಜವಾಬ್ದಾರಿಯುತ ಆಡಳಿತವನ್ನು ನಿರೀಕ್ಷಿಸುತ್ತಿದ್ದು, ಅದನ್ನು ಈಡೇರಿಸೋಣ" ಎಂದು ಸೋನಿಯಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.