ನವದೆಹಲಿ: ಪೂರ್ವ ಲಡಾಖ್ನ ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ನಮ್ಮ 20 ಯೋಧರು ಹುತಾತ್ಮರಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸರ್ವಪಕ್ಷ ಸಭೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಚೀನಾ ನಮ್ಮ ಭೂಪ್ರದೇಶವನ್ನ ಆಕ್ರಮಣ ಮಾಡಿಲ್ಲ ಎಂದಿದ್ದರು.
ಇದೀಗ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಚೀನಾ ಯೋಧರು ಭಾರತದ ಭೂಪ್ರದೇಶ ಆಕ್ರಮಿಸದಿದ್ದರೆ, ನಮ್ಮ 20 ಯೋಧರು ಯಾಕೆ ಹುತಾತ್ಮರಾದರು ಎಂದು ಪ್ರಶ್ನೆ ಮಾಡಿದ್ದಾರೆ.
ಕೇಂದ್ರದ ವಿರುದ್ಧ ಸೋನಿಯಾ ವಾಗ್ದಾಳಿ ಪ್ರಧಾನಿ ಹೇಳುವ ಪ್ರಕಾರ ಚೀನಾ ನಮ್ಮ ಭೂಪ್ರದೇಶ ಆಕ್ರಮಣ ಮಾಡಿಲ್ಲ. ಆದರೆ ಮತ್ತೊಂದೆಡೆ ರಕ್ಷಣಾ ಸಚಿವರು ಹಾಗೂ ವಿದೇಶಾಂಗ ಸಚಿವಾಲಯ ನಿರಂತರವಾಗಿ ಇದೇ ವಿಷಯವಾಗಿ ಚರ್ಚಿಸುತ್ತಿದ್ದಾರೆ. ಇಂದು ಕಾಂಗ್ರೆಸ್ ಹುತಾತ್ಮ ಯೋಧರಿಗೆ ಗೌರವ ಸಲ್ಲಿಕೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ನಮ್ಮ 20 ಯೋಧರು ಏಕೆ ಮತ್ತು ಹೇಗೆ ಹುತಾತ್ಮರಾದರು ಎಂಬುದಕ್ಕೆ ಕೇಂದ್ರ ಸ್ಪಷ್ಟ ಉತ್ತರ ನೀಡಬೇಕು ಎಂದಿದ್ದಾರೆ.
ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು, ಭಾರತ-ಚೀನಾ ಗಡಿಯಲ್ಲಿ ಸದ್ಯ ಬಿಕ್ಕಟ್ಟಿನ ಸಮಸ್ಯೆ ಉದ್ಭವವಾಗಿದೆ. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು ಎಂದಿದ್ದಾರೆ. ಸ್ಯಾಟ್ಲೈಟ್ನಲ್ಲಿ ಕಾಣುವ ಪ್ರಕಾರ ಚೀನಾ ನಮ್ಮ ಭೂಪ್ರದೇಶದೊಳಗೆ ಆಕ್ರಮಣ ಮಾಡಿದೆ. ಇದನ್ನ ಮೋದಿ ಸರ್ಕಾರ ಯಾವ ರೀತಿಯಾಗಿ ಹಿಂಪಡೆದುಕೊಳ್ಳುತ್ತದೆ ಎಂದು ಪ್ರಶ್ನೆ ಮಾಡಿದ್ದು, ಕೇಂದ್ರ ಸರ್ಕಾರ ಸೇನೆಗೆ ಎಲ್ಲ ರೀತಿಯ ಬೆಂಬಲ ಮತ್ತು ಶಕ್ತಿ ನೀಡಬೇಕು ಎಂದಿದ್ದಾರೆ.