ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಅಡಿಯಲ್ಲಿನ 3,000 ಶಾಲೆಗಳಿಗೆ 10ನೇ ತರಗತಿ ಮತ್ತು 12ನೇ ತರಗತಿಯ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭಿಸಲು ಅನುಮತಿ ನೀಡಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕೋರಿಕೆ ಮೇರೆಗೆ ಶನಿವಾರ ಈ ಅನುಮೋದನೆ ನೀಡಿದೆ. 3,000 ಶಾಲೆಗಳ ಜೊತೆಗೆ ಕೇಂದ್ರ ಮಂಡಳಿಯ 16 ಪ್ರಾದೇಶಿಕ ಕಚೇರಿಗಳು ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್ಯಾಚರಣೆ ಆರಂಭಿಸಬಹುದು ಎಂದು ಗೃಹ ಸಚಿವಾಲಯ ತಿಳಿಸಿದೆ.
ತರಗತಿ ಕೊಠಡಿಗಳಲ್ಲಿ ಬೋಧನೆಯಂತಹ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಶಾಲೆಗಳಿಗೆ ನಿಷೇಧಿಸಿದೆ.
ಭಾರತದಾದ್ಯಂತ 3,000 ಸಿಬಿಎಸ್‌ಇ ಅಂಗ ಸಂಸ್ಥೆ ಶಾಲೆಗಳನ್ನು ಮೌಲ್ಯಮಾಪನ ಕೇಂದ್ರಗಳಾಗಿ ಗುರುತಿಸಲಾಗಿದೆ. ಮೌಲ್ಯಮಾಪನದ ಸೀಮಿತ ಉದ್ದೇಶಕ್ಕಾಗಿ ಈ ಶಾಲೆಗಳಿಗೆ ವಿಶೇಷ ಅನುಮತಿ ನೀಡಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಾಲ್ ತಿಳಿಸಿದ್ದಾರೆ.
2.5 ಕೋಟಿ ಉತ್ತರ ಪತ್ರಿಕೆಗಳಳ ತ್ವರಿತ ಮೌಲ್ಯಮಾಪನಕ್ಕೆ ನೆರವಾಗಲಿದೆ. ಉಳಿದ ಮಂಡಳಿಯ ಪರೀಕ್ಷೆಗಳು ನಡೆಸಿದ ನಂತರ (2020 ಜುಲೈ 1ರಿಂದ 15ರವರೆಗೆ ನಿಗದಿಯಾಗಿದೆ) ಫಲಿತಾಂಶ ಪ್ರಕಟಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.