ರಾಂಚಿ(ಜಾರ್ಖಂಡ್): ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್ ಅವರು ಜಾರ್ಖಂಡ್‌ನ 11ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ಹಾಗೂ ಮಿತ್ರ ಪಕ್ಷಗಳು ಗೆಲುವಿನ ನಗೆ ಬೀರಿದ್ದು, ಮೊಹ್ರಾಬಾದಿ ಮೈದಾನದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ರಾಜ್ಯಪಾಲ ದ್ರೌಪದಿ ಮುರ್ಮು ಅವರು ಸೊರೇನ್‌ಗೆ ಪ್ರಮಾಣ ವಚನ ಬೋಧಿಸಿದ್ರು.
ಕೇಂದ್ರ ಸರ್ಕಾದ ವಿರೋಧಿ ಬಣದ ಪ್ರಬಲ ಶಕ್ತಿ ಪ್ರದರ್ಶನದಂತಿದ್ದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ರಾಜಸ್ಥಾನ ಮುಖ್ಯಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ಘಡ ಮುಖ್ಯಮಂತ್ರಿ ಭೂಪೇಶ್ ಭಗೆಲ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮತ್ತು ಲೋಕತಾಂತ್ರಿಕ್ ಜನತಾದಳ ಮುಖಂಡ ಶರದ್ ಯಾದವ್ ಭಾಗವಹಿಸಿದ್ದರು.
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ಜೆಎಂಎಂ ಪಕ್ಷದ ಅಧ್ಯಕ್ಷ ಶಿಬು ಸೊರೆನ್ ಅವರು ತಮ್ಮ ಪುತ್ರ ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣಕ್ಕೆ ಸಾಕ್ಷಿಯಾದರು. ಅಲ್ಲದೆ ಚುನಾವಣೆಯಲ್ಲಿ ಸೋತ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.