ನವದೆಹಲಿ:ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಫೆಬ್ರುವರಿ ಒಂದರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಇದರ ನಡುವೆ ಈ ಬಾರಿಯ ಬಜೆಟ್ನಲ್ಲಿ ಹಣಕಾಸಿನ ಕೊರತೆ(fiscal deficit number) ಎಷ್ಟಿರಲಿದೆ ಎಂಬುದು ಬಹಳಷ್ಟು ಕುತೂಹಲ ಮೂಡಿಸಿದೆ. ಇದಕ್ಕೆಲ್ಲಾ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1ರಂದು ತೆರೆ ಎಳೆಯುವ ಸಾಧ್ಯತೆಯಿದೆ.
ನಿರ್ಮಾಲಾ ಸೀತಾರಾಮನ್ ಕಳೆದ ವರ್ಷ ಜುಲೈನಲ್ಲಿ ಮಂಡಿಸಿದ್ದ ತಮ್ಮ ಚೊಚ್ಚಲ ಬಜೆಟ್ನಲ್ಲಿ, 2019-2020ನೇ ಹಣಕಾಸು ವರ್ಷದ ಹಣಕಾಸಿನ ಕೊರತೆಯು ದೇಶದ ಜಿಡಿಪಿಯ 3.3% ಅಥವಾ 7 ಲಕ್ಷ ಕೋಟಿ ರೂ. ಎಂದು ಅಂದಾಜಿಸಿದ್ದರು.
ಕೇಂದ್ರ ಮತ್ತು ರಾಜ್ಯಗಳಲ್ಲಿ ಹಣಕಾಸಿನ ಶಿಸ್ತು ಮೂಡಿಸಲು 2003ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವು ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ(FRBM Act) ಜಾರಿಗೆ ತಂದಿತ್ತು. ಕೇಂದ್ರವು ತನ್ನ ಆದಾಯ ಕೊರತೆ(revenue deficit)ಅನ್ನು ಶೂನ್ಯ ಶೇಕಡಾ ಮತ್ತು ಹಣಕಾಸಿನ ಕೊರತೆಯನ್ನು ಜಿಡಿಪಿಯ ಶೇ.3 ಕ್ಕೆ ಇಳಿಸುವ ಅಗತ್ಯವಿತ್ತು.
ಹೀಗಿದ್ದರೂ, ಹಲವು ಅರ್ಥಶಾಸ್ತ್ರಜ್ಞರು ಎಫ್‌ಆರ್‌ಬಿಎಂ ಕಾಯ್ದೆಯ ನಿಬಂಧನೆಗಳನ್ನು ಇತ್ತೀಚಿನ ವರ್ಷಗಳಲ್ಲಿ ದುರ್ಬಲಗೊಳಿಸಲಾಗಿದೆ. ಇದು ದೇಶದ ಆರ್ಥಿಕತೆಯಲ್ಲಿ ರಚನಾತ್ಮಕ ದೌರ್ಬಲ್ಯ(structural weakness)ಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಹೀಗಾಗಿ ಆರ್ಥಿಕ ಚೇತರಿಕೆಗಾಗಿ ಮೋದಿ ಸರ್ಕಾರವು ಮೂಲ ಎಫ್‌ಆರ್‌ಬಿಎಂ ಕಾಯ್ದೆಗೆ ಹಿಂದಿರುಗಬೇಕೆಂದು ಸಲಹೆ ನೀಡಿದರು.
'ತತ್ತ್ವಶಾಸ್ತ್ರದ ಪ್ರಕಾರ, ಎಫ್‌ಆರ್‌ಬಿಎಂ ಕಾಯ್ದೆಯು ಆದಾಯದ ಖರ್ಚಿನಿಂದ ಬಂಡವಾಳ ವೆಚ್ಚದವರೆಗೆ ಖರ್ಚು ಬದಲಾಯಿಸುವ ಕಾರ್ಯ ವಿಧಾನವಾಗಿದೆ ಮತ್ತು ಇದು ಖರ್ಚು ಸಂಕುಚಿತ ಕಾರ್ಯವಿಧಾನ(expenditure compression mechanism)ಅಲ್ಲ' ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಮತ್ತು ಪಾಲಿಸಿಯ ಪ್ರಾಧ್ಯಾಪಕ ಎನ್.ಆರ್. ಭಾನುಮೂರ್ತಿ ಹೇಳಿದರು.
'ಮೂಲ ಎಫ್‌ಆರ್‌ಬಿಎಂ ಕಾಯ್ದೆಯು ಹಣಕಾಸಿನ ಕೊರತೆಯನ್ನು ಜಿಡಿಪಿಯ 3% ಮತ್ತು ಆದಾಯ ಕೊರತೆಯನ್ನು ಶೂನ್ಯ ಶೇಕಡಕ್ಕೆ ತರುವಂತೆ ಆದೇಶಿಸಿದೆ. ಈ ಹೊಂದಾಣಿಕೆಯಲ್ಲಿ ಬಂಡವಾಳ ವೆಚ್ಚವು ಒಂದು ಅವಧಿಯಲ್ಲಿ ಹೆಚ್ಚಾಗುತ್ತದೆ ಮತ್ತು ಬಳಕೆಯ ಖರ್ಚು ಕುಸಿಯುತ್ತದೆ' ಎಂದು ಅವರು ಹೆಚ್ಚಿನ ಬಂಡವಾಳ ವೆಚ್ಚ ಮತ್ತು ಹೆಚ್ಚಿನ ಜಿಡಿಪಿ ಬೆಳವಣಿಗೆಯ ನಡುವಿನ ನೇರ ಸಂಬಂಧವನ್ನು ವಿವರಿಸುವಾಗ ಈಟಿವಿ ಭಾರತಕ್ಕೆ ತಿಳಿಸಿದರು.