ನವದೆಹಲಿ:ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (PMGKP) ಅಡಿ ಜೂನ್ 2 ರವರೆಗೆ ಸುಮಾರು 42 ಕೋಟಿ ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ (Direct Benefit Transfer) ಮೂಲಕ 53,248 ಕೋಟಿ ರೂ. ಹಣವನ್ನು ನೇರವಾಗಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ಹೇರಲಾದ ಲಾಕ್‌ಡೌನ್ ಪರಿಣಾಮದಿಂದ ಸಮಾಜದ ದುರ್ಬಲ ಹಾಗೂ ಅತಿ ದುರ್ಬಲ ವರ್ಗಗಳನ್ನು ಮೇಲೆತ್ತಲು 1.7 ಲಕ್ಷ ಕೋಟಿ ರೂ.ಗಳ ಪಿಎಂಜಿಕೆಪಿ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾರ್ಚ್ 26 ರಂದು ಘೋಷಿಸಿದ್ದರು.
ಈ ಪ್ಯಾಕೇಜ್ ಅಡಿ, ಮಹಿಳೆಯರು, ಬಡ ಹಿರಿಯ ನಾಗರಿಕರು ಮತ್ತು ರೈತರಿಗೆ ಉಚಿತ ಆಹಾರ ಧಾನ್ಯಗಳು ಹಾಗೂ ನಗದು ಪಾವತಿಯನ್ನು ಸರ್ಕಾರ ಘೋಷಿಸಿದೆ. ಇದರ ತ್ವರಿತ ಅನುಷ್ಠಾನವನ್ನ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿವೆ.
ಈವರೆಗೆ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 8,488 ಕೋಟಿ ರೂ.ಗಳನ್ನು ವರ್ಗಾಯಿಸಿದೆ. ಅಲ್ಲದೇ 8.58 ಕೋಟಿ ಉಚಿತ ಉಜ್ವಲ ಸಿಲಿಂಡರ್‌ಗಳನ್ನು ಈಗಾಗಲೇ ವಿತರಿಸಲಾಗಿದ್ದು, ಒಟ್ಟು 9.25 ಕೋಟಿ ಸಿಲಿಂಡರ್‌ಗಳನ್ನು ಕಾಯ್ದಿರಿಸಲಾಗಿದೆ. ಈ ಪ್ಯಾಕೇಜ್ ಅಡಿ, ಉಜ್ವಲ ಫಲಾನುಭವಿಗಳಿಗೆ ಜೂನ್ 30ರವರೆಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಿಸಲು ಸರ್ಕಾರ ನಿರ್ಧರಿಸಿದೆ.
59.23 ಲಕ್ಷ ಇಪಿಎಫ್‌ಒ ಖಾತೆದಾರ ಉದ್ಯೋಗಿಗಳ ಅನುಕೂಲಕ್ಕಾಗಿ ಜೂನ್ 2 ರವರೆಗೆ ಸರ್ಕಾರವು 895 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರವು ಪಿಎಂ - ಕಿಸಾನ್ ಯೋಜನೆಯ ಮೊದಲ ಕಂತು, 16,394 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. ಅದನ್ನು ಈಗಾಗಲೇ 8.19 ಕೋಟಿ ರೈತರಿಗೆ ವರ್ಗಾಯಿಸಿದೆ.
ಜೂನ್ 2 ರವರೆಗೆ ಸರ್ಕಾರವು ಮಹಿಳಾ ಜನಧನ ಖಾತೆದಾರರಿಗೆ 20,344 ಕೋಟಿ ರೂ.ಗಳನ್ನು ವಿತರಿಸಿದೆ. 20.05 ಕೋಟಿ ಮಹಿಳಾ ಜನಧನ ಖಾತೆದಾರರಿಗೆ 10,029 ಕೋಟಿ ರೂ.ಗಳನ್ನು ವಿತರಿಸಿದೆ. ಇದಲ್ಲದೇ, ಸರ್ಕಾರವು ಸುಮಾರು 2.81 ಕೋಟಿ ವಯಸ್ಕರು, ವಿಧವೆಯರು ಮತ್ತು ವಿಕಲಾಂಗ ಚೇತನರಿಗೆ 2,814 ಕೋಟಿ ರೂ. ಬಿಡುಗಡೆ ಮಾಡಿದೆ.