ನವದೆಹಲಿ:ಅಟ್ಲಾಸ್ ಸೈಕಲ್ಸ್ ಕಾರ್ಖಾನೆಯನ್ನು ಮುಚ್ಚಲಾಗಿದೆ ಎಂದು ವರದಿಯಾದ ಬೆನ್ನಲೆ ಕಾಂಗ್ರೆಸ್ನ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರವು ತನ್ನ ಆರ್ಥಿಕ ಪ್ಯಾಕೇಜ್ ಮತ್ತು ಉದ್ಯೋಗ ಸೃಷ್ಟಿಗೆ ಜಾಹೀರಾತು ನೀಡುತ್ತಿದೆ. ಆದ್ರೆ ವಾಸ್ತವದಲ್ಲಿ ಕಾರ್ಖಾನೆಗಳು ಸ್ಥಗಿತಗೊಳ್ಳುತ್ತಿದ್ದು, ನಿರುದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
"ನಿನ್ನೆ ವಿಶ್ವ ಬೈಸಿಕಲ್ ದಿನ, ಈ ದಿನದಂದು ಅಟ್ಲಾಸ್ ಸೈಕಲ್ಸ್ ಗಾಜಿಯಾಬಾದ್ ಕಾರ್ಖಾನೆ ಮುಚ್ಚಲ್ಪಟ್ಟಿದೆ. ಇದರಿಂದ 1,000 ಕ್ಕೂ ಹೆಚ್ಚು ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಲಾಗಿದೆ" ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
"ಈ ಮೊತ್ತದ ಪ್ಯಾಕೇಜ್ ನೀಡಲಾಗಿದೆ, ಅನೇಕ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ, ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಲಾಗಿದೆ ಎಂದು ಸರ್ಕಾರದ ಪ್ರಚಾರ ಅಭಿಯಾನದಲ್ಲಿ ನಾವು ಕೇಳಿದ್ದೇವೆ. ಆದರೆ, ವಾಸ್ತವದಲ್ಲಿ ಜನರಿಗೆ ಉದ್ಯೋಗ ಕೊನೆಗೊಳ್ಳುತ್ತಿದೆ, ಕಾರ್ಖಾನೆಗಳು ಮುಚ್ಚುತ್ತಿವೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.