ನವದೆಹಲಿ:ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಗ್ಲೌಸ್ಗಳ ಲಭ್ಯತೆ ಹಾಗೂ ದರದ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಔಷಧಗಳ ಬೆಲೆ ಪ್ರಾಧಿಕಾರಕ್ಕೆ ಕೇಂದ್ರ ಸರ್ಕಾರ ತಿಳಿಸಿದೆ.
ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 10ರ ಉಪವಿಭಾಗ (2) ರ ಷರತ್ತು (ಐ) ಅಡಿಯಲ್ಲಿ ಮಾರ್ಚ್ 13ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಹೆಚ್‌ಡಬ್ಲ್ಯು) ನೀಡಿದ ಆದೇಶದ ಅನುಸಾರವಾಗಿ, ಎನ್‌ಪಿಪಿಎಗೆ (ರಾಷ್ಟ್ರೀಯ ಔಷಧಗಳ ಬೆಲೆ ಪ್ರಾಧಿಕಾರ) ಈ ಆದೇಶ ಹೊರಡಿಸಲಾಗಿದೆ. ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಗ್ಲೌಸ್ಗಳ ಲಭ್ಯತೆ ಮತ್ತು ಬೆಲೆ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ತಿಳಿಸಲಾಗಿದೆ.
ಅದರಂತೆ, COVID-19 ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ನಿಯಂತ್ರಕ ವಸ್ತುಗಳ ಲಭ್ಯತೆ ಬಗ್ಗೆ ತಿಳಿಯಲು ಅಗತ್ಯ ಕ್ರಮ ವಹಿಸುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಎನ್‌ಪಿಪಿಎ ನಿರ್ದೇಶಿಸಿದೆ. ಅಗತ್ಯ ವಸ್ತುಗಳು ಅವುಗಳ ಮೇಲೆ ಮುದ್ರಿತಗೊಂಡ ದರಕ್ಕೆ (ಎಂಆರ್‌ಪಿ) ಲಭ್ಯವಾಗಬೇಕು. ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗದಂತೆ ಕ್ರಮವಹಿಸುವಂತೆ ಎನ್‌ಪಿಪಿಎ ಆದೇಶಿಸಿದೆ.
ಅಲ್ಲದೆ, ಕೊರೊನಾ ನಿಯಂತ್ರಕ ವಸ್ತುಗಳ ತಯಾರಕರು, ಆಮದುದಾರರು, ಸಂಗ್ರಹಣಗಾರರು ಮತ್ತು ಚಿಲ್ಲರೆ ವ್ಯಾಪಾರಿಗಳ ಮೇಲೆ ಜಾಗರೂಕರಾಗಿರಬೇಕು. ಅಗತ್ಯ ವಸ್ತುಗಳ ಉತ್ಪಾದನೆ ಮತ್ತು ವಿತರಣೆಯಲ್ಲಿ ಲಾಭ ಗಳಿಸುವ ದೃಷ್ಟಿಯಿಂದ ಅಕ್ರಮ ದಂಧೆ ನಡೆಯುವ ಸಾಧ್ಯತೆಯಿದ್ದು, ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ.