ಮಹಾತ್ಮಾ ಗಾಂಧೀಜಿ ಓರ್ವ ವಿಜ್ಞಾನ ವಿರೋಧಿ, ಯಂತ್ರಗಳ ವಿರೋಧಿ, ಅವರು ಆಧುನಿಕತೆಯನ್ನೂ ವಿರೋಧಿಸಿದ್ದರು ಅನ್ನೋದು ಸಾಮಾನ್ಯ ಅಭಿಪ್ರಾಯ. ಆದರೆ ಇದನ್ನು ತಪ್ಪಾಗಿ ಅರ್ಥೈಸಲಾಗಿದೆ. ಗಾಂಧಿಯವರು ವಿಜ್ಞಾನ ಎಂಬ ಪದವನ್ನು ಪದೇ ಪದೇ ಬಳಸುತ್ತಿದ್ದರು. ಅದರೊಂದಿಗೆ ಅವರು ತಮ್ಮ ಆತ್ಮಚರಿತ್ರೆಯಲ್ಲೂ ಈ ಪದವನ್ನು ಪ್ರಯೋಗ ಮಾಡಿದ್ದರು.
ಗಾಂಧಿಯವರ ಚಿಂತನೆಯು ತುಂಬಾ ವೈವಿಧ್ಯಮಯವಾಗಿತ್ತು. ಇದು ಮನುಷ್ಯ ಮತ್ತು ಪ್ರಕೃತಿ, ಮನುಷ್ಯ ಮತ್ತು ಯಂತ್ರ, ಯಂತ್ರವನ್ನೂ ಮೀರಿದ ಮನುಷ್ಯನ ಸಾಮರ್ಥ್ಯ, ನಾಗರಿಕ ಸಮಾಜದಲ್ಲಿ ಪರ್ಯಾಯ ವಿಜ್ಞಾನಕ್ಕೆ ಒಂದು ಸ್ಥಳ, ಆಯುರ್ವೇದದಲ್ಲಿ ನೀತಿ ಮತ್ತು ಸಂಶೋಧನೆ, ವಿಜ್ಞಾನ ಶಿಕ್ಷಣ, ವಿಜ್ಞಾನ ನೀತಿ, ಸತ್ಯಾಗ್ರಹಿ ವಿಜ್ಞಾನಿ, ಖಾದಿ-ವಿಜ್ಞಾನ, ಚರಕದಲ್ಲಿ ಸುಧಾರಿತ ಸಂಶೋಧನೆ, ಸಂಶೋಧನೆಯಲ್ಲಿ ಪ್ರಾಣಿಗಳ ಬಳಕೆಯನ್ನೂ ಸೇರಿತ್ತು.
ಗಾಂಧಿಯವರ ಬಗೆಗಿನ ತಪ್ಪು ಕಲ್ಪನೆಗೆ ಕಾರಣ ಅಪೂರ್ಣ ಅಧ್ಯಯನಗಳು ಮತ್ತು ಲಭ್ಯವಿರುವ ಸಾಹಿತ್ಯದ ತಪ್ಪು ವ್ಯಾಖ್ಯಾನ. ಕಳೆದ ಎರಡು-ಮೂರು ದಶಕಗಳಲ್ಲಿ, ಗಾಂಧಿಯನ್ನು ವಿಜ್ಞಾನದ ಪರಿಧಿಯಲ್ಲಿ ಅನ್ವೇಷಿಸಲು ವಿಶ್ವಾದ್ಯಂತ ಅನೇಕ ಹೊಸ ಪ್ರಯತ್ನಗಳು ನಡೆದವು.
ಇವರ ಬಗೆಗಿನ ವ್ಯಾಖ್ಯಾನಗಳು ಹೆಚ್ಚಾಗಿ ಅವರ ಹಿಂದ್ ಸ್ವರಾಜ್ ಕೃತಿಯನ್ನಾಧರಿಸಿವೆ. ಇದನ್ನು ಮಹಾತ್ಮಾ ಗಾಂಧೀಜಿ 1909ರಲ್ಲಿ ಬರೆದರು. ಇದರಲ್ಲಿ ಅವರ ಜೀವನದ ಕೊನೆಯ ನಾಲ್ಕು ದಶಕಗಳ ಬಗೆಗೆ ಮಾತ್ರವೇ ಬರೆಯಲಾಗಿದೆ. ಆದ್ದರಿಂದ ಗಾಂಧಿಯವರ ಬಗ್ಗೆ ಅಧ್ಯಯನ ಮಾಡಲು ಮತ್ತು ಹೇಳಲು ಗಾಂಧಿಯವರ ಸಂಪೂರ್ಣ ಕೃತಿಗಳನ್ನು ಎಚ್ಚರಿಕೆಯಿಂದ ಅದ್ಯಯನ ಮಾಡಬೇಕಾಗಿದೆ.
ಪ್ರತಿಯೊಂದರ ಬಗೆಗೂ ಗಾಂಧಿಯವರ ಯೋಚನೆ ಹಾಗೂ ಚಿಂತನೆಗಳು ವಿಭಿನ್ನ. ಗಾಂಧಿ ಹಲ್ಲು ಸ್ವಚ್ಛಗೊಳಿಸುವ ಕಡ್ಡಿ ಮತ್ತು ಚರಕವನ್ನು ಯಂತ್ರವೆಂದು ನಂಬಿದ್ದರು. ಅಲ್ಲದೆ ಮಾನವ ದೇಹವನ್ನೇ ಅತ್ಯುತ್ತಮ ಮತ್ತು ಅದ್ಭುತ ಯಂತ್ರವೆಂದು ಪರಿಗಣಿಸಿದ್ದರು. ಚಪ್ಪಲಿ ತಯಾರಿಸುವ ಮನುಷ್ಯ, ಶೌಚಾಲಯ ಸ್ವಚ್ಛಗೊಳಿಸುವ ವ್ಯಕ್ತಿ, ಬಟ್ಟೆ ಹೊಲಿಯುವವ ಹಾಗೂ ನರ್ಸ್ಗಳ ಬಗ್ಗೆ ಅವರ ಆಸಕ್ತಿ ಬಹಳ ಅದ್ಭುತ ಮತ್ತು ವಿಸ್ತಾರವಾಗಿತ್ತು.
1904ರಲ್ಲಿ ಬ್ರಿಟಿಷ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್‌ನ ಸದಸ್ಯರು ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದರು. ಗಾಂಧಿಯವರು ಈ ಹೆಸರನ್ನು ಬ್ರಿಟಿಷ್ ಎಂಪೈರ್ ಅಸೋಸಿಯೇಶನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್ ಎಂದು ಬದಲಾಯಿಸಲು ಮತ್ತು ಬ್ರಿಟಿಷ್ ವಸಾಹತುಗಳ ಅಗತ್ಯಗಳನ್ನು ಪರಿಗಣಿಸಿ ಅದರ ಚಟುವಟಿಕೆಗಳನ್ನು ವಿಸ್ತರಿಸಲು ಕೇಳಿಕೊಂಡಿದ್ದರು. ಇಂತಹ ಪ್ರಯತ್ನ ಭಾರತಕ್ಕೆ ಮಾತ್ರವಲ್ಲದೇ ಅಸೋಸಿಯೇಷನ್ಗೂ ಸಹಾಯ ಮಾಡುತ್ತದೆ.
ಪರ್ಯಾಯ ಮತ್ತು ಅಹಿಂಸಾತ್ಮಕ ವಿಜ್ಞಾನವನ್ನು ಗಾಂಧೀಜಿ ಪ್ರತಿಪಾದಿಸಿದರು. ತಮ್ಮ ನಿಯತಕಾಲಿಕೆ 'ಇಂಡಿಯನ್ ಒಪಿನಿಯನ್' ಮೂಲಕ ವಿಜ್ಞಾನಿಗಳ ವಿಚಾರಣೆಯ ಧೈರ್ಯ ಮತ್ತು ಮನೋಭಾವವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿದರು. ಪಾಶ್ಚಾತ್ಯ ವಿಜ್ಞಾನದ ವೈಜ್ಞಾನಿಕ ಪ್ರಗತಿಯನ್ನು ಗಮನಿಸುವಾಗ, ಅವರು ಅದರ ನೈತಿಕ ಪ್ರಜ್ಞೆಯನ್ನು ಟೀಕಿಸಿದರು. ಇನ್ನೊಂದೆಡೆ ವಿಜ್ಞಾನಿ ಆಲ್ಫ್ರೆಡ್ ವ್ಯಾಲೇಸ್ ಅವರ ಪದಗಳನ್ನು ಹೆಚ್ಚು ಉಲ್ಲೇಖಿಸಿದರು. ಇನ್ನೊಂದೆಡೆ ವೈಜ್ಞಾನಿಕ ಆವಿಷ್ಕಾರಗಳ ಪರಿಣಾಮವಾಗಿ ಜನರ ನೈತಿಕ ಪ್ರಜ್ಞೆ ಯಾವುದೇ ರೀತಿಯಲ್ಲಿ ಸುಧಾರಿಸಿಲ್ಲ. ಯುರೋಪಿನ ನೈತಿಕ ಸ್ಥಿತಿ ಒಂದು ಇಂಚೂ ಸುಧಾರಿಸಿಲ್ಲ. ಅದು ದ್ವೇಷ ಮತ್ತು ಅನ್ಯಾಯವನ್ನೂ ಕಡಿಮೆ ಮಾಡಿಲ್ಲ ಎಂದು ಗಾಂಧಿ ಅಭಿಪ್ರಾಯಪಟ್ಟರು.
ಆರಂಭದಲ್ಲಿ ಗಾಂಧಿ, ಚರಕದ ವಿಜ್ಞಾನದಂತಹ ಹೊಸ ಪದಗಳನ್ನು ಬಳಸಿದರು. ನಂತರ ಅವರು ಖಾದಿ ವಿಜ್ಞಾನದಂತಹ ಬದಲಾವಣೆಗಳೊಂದಿಗೆ ತಮ್ಮನ್ನು ತಾವು ಮಾರ್ಪಡಿಸಿಕೊಂಡರು. ಅವರು ಸತ್ಯಾಗ್ರಹ ವಿಜ್ಞಾನಿ ಎಂಬ ಹೊಸ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ಇದರಿಂದಾಗಿ ಅವರ ಆಪ್ತ ಅನುಯಾಯಿ ಮತ್ತು ಸತ್ಯಾಗ್ರಹ ಆಶ್ರಮದ ವ್ಯವಸ್ಥಾಪಕರಾದ ಮಗನ್ಲಾಲ್ ಗಾಂಧಿಯವರು, ಮಹಾತ್ಮಾ ಗಾಂಧೀಜಿಯವರ ಅನೇಕ ವಿಚಾರಗಳನ್ನು ವಾಸ್ತವಕ್ಕೆ ಭಾಷಾಂತರಿಸಲು ಸಾಧ್ಯವಾಯಿತು. ದುರದೃಷ್ಟವಶಾತ್, ಮಗನ್ಲಾಲ್ ಗಾಂಧಿಯವರು 1928ರಂದು ಸಣ್ಣ ವಯಸ್ಸಿಗೇ ಸಾವನ್ನಪ್ಪಿದರು, ಇಲ್ಲದಿದ್ದರೆ ನಾವು ಹೆಚ್ಚು ಅರ್ಥಪೂರ್ಣವಾದ ಗಾಂಧಿ ವಿಜ್ಞಾನ ವಿಧಾನಗಳನ್ನು ತಿಳಿದುಕೊಳ್ಳಬಹುದಾಗಿತ್ತು.
ಆರಂಭದಲ್ಲಿ ವೈಜ್ಞಾನಿಕ ಪ್ರಯತ್ನಗಳಲ್ಲಿ ಗಾಂಧಿಯವರು ಪಿ.ಸಿ. ರೇ ಮತ್ತು ಜೆ.ಸಿ. ಬೋಸ್‌ರನ್ನು ಅನೇಕ ವಿಚಾರಕ್ಕಾಗಿ ಇಷ್ಟಪಡುತ್ತಿದ್ದರು. 1927ರಲ್ಲಿ ಗಾಂಧಿಯವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಮಾಜಕ್ಕೆ ತಮ್ಮ ಜವಾಬ್ದಾರಿಗಳನ್ನು ನೆನಪಿಸಿದರು. ಅಲ್ಲದೆ ಅವರ ಸಂಶೋಧನೆ ಮತ್ತು ಪ್ರಯೋಗಗಳಲ್ಲಿ ಹೃದಯ ಮತ್ತು ಮನಸ್ಸು ಎರಡನ್ನೂ ಸಂಯೋಜಿಸುವ ಅವಶ್ಯಕತೆಯಿದೆ ಎಂದರು.
1934ರಿಂದ ಗಾಂಧಿಯವರು ಹಳ್ಳಿ ಹಳ್ಳಿಗಳಿಗೂ ವಿಜ್ಞಾನವನ್ನು ಪ್ರತಿಪಾದಿಸಿದರು. ಅಖಿಲ ಭಾರತ ಗ್ರಾಮೋದ್ಯಮ ಸಂಘದ 20 ಸದಸ್ಯರನ್ನೊಳಗೊಂಡ ಸಲಹೆಗಾರರ ಮಂಡಳಿಯನ್ನು ರಚಿಸಿದರು. ಇದರಲ್ಲಿ ಸಿ ವಿ ರಾಮನ್, ಪಿ ಸಿ ರೇ, ಜೆ ಸಿ ಬೋಸ್ ಮತ್ತು ಸ್ಯಾಮ್ ಹಿಗ್ಗಿನ್ಬೋಥಮ್ ಅವರಂತಹ ವಿಜ್ಞಾನಿಗಳು ಸೇರಿದರು ಅನ್ನೋದು ವಿಶೇಷ.
ಒಟ್ಟಾರೆ ಗಾಂಧಿ ವಿಜ್ಞಾನ ವಿರೋಧಿ, ಯಂತ್ರ ವಿರೋಧಿಯಾಗಲಿ ಅಥವಾ ಆಧುನಿಕ ವಿರೋಧಿಯಾಗಲಿ ಅಲ್ಲ ಎಂಬುದು ಸ್ಪಷ್ಟ. ತನ್ನನ್ನು ನಿರಂತರವಾಗಿ ಕಲಿಯಲು ಮತ್ತು ನವೀಕರಿಸಲು ಅವರು ಸಿದ್ಧರಾಗಿದ್ದರು. ಅವರು ವಿಜ್ಞಾನ ಮತ್ತು ಮಾನವೀಯ ವಿಜ್ಞಾನವನ್ನು ತುಂಬಾ ಇಷ್ಟಪಟ್ಟರು.