ಚೆನ್ನೈ:ಮಹಾಮಾರಿ ಕೋವಿಡ್ ವಿರುದ್ಧ ಇಲ್ಲಿಯವರೆಗೆ ಯಾವುದೇ ಲಸಿಕೆ ಸಿದ್ಧವಾಗಿಲ್ಲ. ಯಾವ ವೇಳೆಗೆ ಅದು ಮಾರುಕಟ್ಟೆಗೆ ರಿಲೀಸ್ ಆಗಲಿದೆ ಎಂಬ ಮಾಹಿತಿ ಕೂಡ ಸರಿಯಾಗಿ ಲಭ್ಯವಾಗುತ್ತಿಲ್ಲ. ಇದರ ಮಧ್ಯೆ ಲಸಿಕೆ ಮೇಲಿನ ರಾಜಕಾರಣ ಶುರುಗೊಂಡಿದೆ.
ಕೋವಿಡ್ ಲಸಿಕೆ ಸಿದ್ಧವಾಗ್ತಿದ್ದಂತೆ ತಮಿಳುನಾಡಿನ ಎಲ್ಲರಿಗೂ ಉಚಿತ ವಿತರಣೆ: ಪಳನಿಸ್ವಾಮಿ ಅಭಯ!
ಕೋವಿಡ್ ಲಸಿಕೆ ಮೇಲೂ ಇದೀಗ ರಾಜಕಾರಣ ಆರಂಭಗೊಂಡಿದ್ದು, ಆ ವಿಷಯವನ್ನಿಟ್ಟುಕೊಂಡು ವಿವಿಧ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಯತ್ನ ನಡೆಸುತ್ತಿವೆ.
ಬಿಹಾರ ಚುನಾವಣೆಯಲ್ಲಿ ಈಗಾಗಲೇ ಎನ್ಡಿಎ ಪ್ರಣಾಳಿಕೆ ರಿಲೀಸ್ ಮಾಡಿದ್ದು, ರಾಜ್ಯದ ಎಲ್ಲರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡುವ ಭರವಸೆ ನೀಡಿದೆ. ಇದರ ಬೆನ್ನಲ್ಲೇ ಇದೀಗ ತಮಿಳುನಾಡಿನಲ್ಲೂ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಕೂಡ ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡುವ ಘೋಷಣೆ ಮಾಡಿದ್ದಾರೆ. ವಿಶೇಷ ಎಂದರೆ ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.
ಕೋವಿಡ್ ವ್ಯಾಕ್ಸಿನ್ ಲಭ್ಯವಾಗುತ್ತಿದ್ದಂತೆ ರಾಜ್ಯದಲ್ಲಿನ ಎಲ್ಲರಿಗೂ ಉಚಿತವಾಗಿ ನೀಡಲಾಗುವುದು, ಅದಕ್ಕಾಗಿ ಯಾವುದೇ ರೀತಿಯ ಹಣ ಪಡೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ದೇಶದಲ್ಲಿ ಈಗಾಗಲೇ ಲಕ್ಷಾಂತರ ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅನೇಕರು ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ. ಆದರೆ ಇಲ್ಲಿಯವರೆಗೆ ಅದಕ್ಕೆ ಯಾವುದೇ ರೀತಿಯ ವ್ಯಾಕ್ಸಿನ್ ಕಂಡು ಹಿಡಿಯಲಾಗಿಲ್ಲ.