ನವದೆಹಲಿ:ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ 84ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲ ದಿನಗಳಿಂದ ದೆಹಲಿಯ ಆರ್ಮಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಕೋಮಾಗೆ ಜಾರಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
84 ವರ್ಷದ ಪ್ರಣಬ್ ಮುಖರ್ಜಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರು ಕಂಬನಿ ಮಿಡಿದು ಟ್ವೀಟ್ ಮಾಡಿದ್ದಾರೆ.
ನರೇಂದ್ರ ಮೋದಿ: ಪ್ರಧಾನಿ
ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಭಾರತ ದುಃಖಿಸಿದೆ. ಅವರು ನಮ್ಮ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಅಳಿಸಲಾಗದ ಗುರುತು ಬಿಟ್ಟು ಹೋಗಿದ್ದಾರೆ. ವಿದ್ವಾಂಸರ ಶ್ರೇಷ್ಠತೆ, ಅತ್ಯುನ್ನತ ರಾಜಕಾರಣಿಯಾಗಿದ್ದ ಅವರನ್ನ ಸಮಾಜದ ಎಲ್ಲ ವರ್ಗದವರು ಮೆಚ್ಚಿದ್ದರು ಎಂದಿದ್ದಾರೆ.
ಅಮಿತ್ ಶಾ: ಗೃಹ ಸಚಿವ
ಭಾರತದ ಮಾಜಿ ರಾಷ್ಟ್ರಪತಿ ಭಾರತ ರತ್ನ ಶ್ರೀ ಪ್ರಣಬ್ ಮುಖರ್ಜಿ ಜೀ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಅತ್ಯಂತ ಅನುಭವಿ ನಾಯಕರಾಗಿದ್ದರು. ರಾಷ್ಟ್ರಕ್ಕಾಗಿ ಅತ್ಯಂತ ಭಕ್ತಿಯಿಂದ ಸೇವೆ ಸಲ್ಲಿಸಿದ್ದಾರೆ. ಪ್ರಣಬ್ ಜೀ ಅವರ ವಿಶಿಷ್ಟ ವೃತ್ತಿ ಜೀವನವು ಇಡೀ ದೇಶಕ್ಕೆ ಬಹಳ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.
ಅವರ ಜೀವನವು ನಮ್ಮ ತಾಯಿ ನಾಡಿಗೆ ಅಳಿಸಲಾಗದ ಕೊಡುಗೆಯಾಗಿದ್ದು, ಅವರ ನಿಧನದ ಬಳಿಕವೂ ಭಾರತೀಯ ರಾಜಕೀಯದಲ್ಲಿ ಅವರ ಹೆಜ್ಜೆ ಗುರುತು ಉಳಿದುಕೊಳ್ಳಲಿದೆ. ಅವರ ನಿಧನದ ಶಕ್ತಿ ಭರಿಸುವ ಧೈರ್ಯ ಕುಟುಂಬಕ್ಕೆ, ಅನುಯಾಯಿಗಳಿಗೆ ದೇವರು ನೀಡಲಿ. ಓಂ ಶಾಂತಿ ಶಾಂತಿ ಶಾಂತಿ ಎಂದು ಶಾ ಟ್ವೀಟ್ ಮಾಡಿದ್ದಾರೆ.
ರಾಮನಾಥ್ ಕೋವಿಂದ್: ರಾಷ್ಟ್ರಪತಿ
ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಇನ್ನಿಲ್ಲ ಎಂಬ ವಿಷಯ ಕೇಳಿ ಬೇಸರವಾಗಿದೆ. ಅವರ ನಿಧನ ಒಂದು ಯುಗದ ಅಂತ್ಯ. ರಾಷ್ಟ್ರವು ತನ್ನ ಯೋಗ್ಯ ಪುತ್ರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಅವರ ಸಾವಿನ ನೋವು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ: ಎಐಸಿಸಿ ಮಾಜಿ ಅಧ್ಯಕ್ಷ
ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ದುರದೃಷ್ಟಕರ ನಿಧನದ ಸುದ್ದಿಯನ್ನು ರಾಷ್ಟ್ರವು ಬಹಳ ದುಃಖದಿಂದ ಸ್ವೀಕರಿಸುತ್ತದೆ. ದೇಶದ ಎಲ್ಲ ಜನರೊಂದಿಗೆ ಸೇರಿ ನಾವು ಅವರಿಗೆ ಗೌರವ ಸಲ್ಲಿಸುತ್ತೇನೆ. ದುಃಖಿತ ಕುಟುಂಬ ಮತ್ತು ಅವರ ಸ್ನೇಹಿತರಿಗೆ ನನ್ನ ಆಳವಾದ ಸಂತಾಪ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.