ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
1998ರಿಂದ 2013ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಇಂದು ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದು, ಅವರ ಸಾವಿಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ದೆಹಲಿ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿರುವ ಅವರು, ಶಾಂತಿಯುತ ವ್ಯಕ್ತಿತ್ವದಿಂದಲೇ ಗಮನ ಸೆಳೆದಿದ್ದರು. ಅವರ ಸಾವಿನ ದುಃಖವನ್ನ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಹಾಗೂ ಬೆಂಬಲಿಗರಿಗೆ ದೇವರು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಮಾಜಿ ಸಿಎಂ ಹಾಗೂ ವರಿಷ್ಠ ರಾಜಕಾರಣಿ ಶೀಲಾ ದೀಕ್ಷಿತ್ ಅವರ ಸಾವಿನ ಸುದ್ದಿ ಕೇಳಿ ಆಘಾತವಾಗಿದ್ದು, ಅವರ ಸಿಎಂ ಅವಧಿಯಲ್ಲಿ ದೆಹಲಿಗೆ ಮಹತ್ವಪೂರ್ಣ ಕೊಡುಗೆ ನೀಡಿದ್ದು, ಮುಂದಿನ ಪೀಳಿಗೆಗೂ ಅವು ನೆನಪಿನಲ್ಲಿ ಉಳಿಯುತ್ತವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಶೀಲಾ ದೀಕ್ಷಿತ್ ಅವರ ಸಾವಿನ ಸುದ್ದಿ ಕೇಳಿ ನನಗೆ ಅಘಾತವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮಗಳಂತೆ ಅವರು ಸೇವೆ ಸಲ್ಲಿಸಿದ್ದು, ನನ್ನ ವೈಯಕ್ತಿಕ ವಿಚಾರಗಳನ್ನ ಸಹ ಅವರೊಂದಿಗೆ ನಾನು ಶೇರ್ ಮಾಡಿಕೊಂಡಿದ್ದೇನೆ. ಅವರ ಸಾವಿನ ದುಃಖವನ್ನ ಭರಿಸುವ ಶಕ್ತಿಯನ್ನ ಭಗವಂತ ಅವರಿಗೆ ನೀಡಲಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಉಳಿದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪ್ರಿಯಾಂಕಾ ಗಾಂಧಿ,ಬಿಜೆಪಿ ದೆಹಲಿ ಅಧ್ಯಕ್ಷ ಮನೋಜ್ ತಿವಾರಿ,ದೆಹಲಿ ಡೆಪ್ಯುಟಿ ಸಿಎಂ ಮನೀಷ್ ಸಿಸೋಡಿಯಾ, ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.