ಕರ್ನಾಟಕ

karnataka

By

Published : Sep 26, 2019, 12:57 PM IST

ETV Bharat / bharat

ಅಯೋಧ್ಯೆ ಭೂವಿವಾದ: ಇನ್ನೊಂದೇ ತಿಂಗಳಲ್ಲಿ ಐತಿಹಾಸಿಕ ತೀರ್ಪು?

ಅಯೋಧ್ಯೆ ಭೂವಿವಾದಕ್ಕೆ ಸಂಬಂಧಪಟ್ಟಂತೆ ಎಲ್ಲ ಪಾಲುದಾರರ ವಾದಕ್ಕೆ ಅಕ್ಟೋಬರ್​ 18 ಅಂತಿಮ ಗಡುವು. ಆ ಬಳಿಕ ಒಂದು ದಿನವನ್ನು ಹೆಚ್ಚುವರಿಯಾಗಿ ನೀಡಲು ಸಾಧ್ಯವಿಲ್ಲ ಎಂದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಇಂದು ಪ್ರಕರಣದ ಕುರಿತ 32ನೇ ದಿನದ ನಿತ್ಯ ವಿಚಾರಣೆ ನಡೆಯುತ್ತಿದೆ.

ಅಯೋಧ್ಯೆ ಭೂವಿವಾದ

ನವದೆಹಲಿ: ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿದಂತೆ ಕಳೆದೊಂದು ತಿಂಗಳಿನಿಂದ ನಿತ್ಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್​ ಇದೀಗ ಎಲ್ಲ ವಾದ-ಪ್ರತಿವಾದವನ್ನು ಅಕ್ಟೋಬರ್ 18ಕ್ಕೆ ಮುಕ್ತಾಯಗೊಳಿಸುವಂತೆ ವಕೀಲರಿಗೆ ಸೂಚಿಸಿದೆ.

ಎಲ್ಲ ಪಾಲುದಾರರ ವಾದಕ್ಕೆ ಅಕ್ಟೋಬರ್​ 18 ಅಂತಿಮ ಗಡುವು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದು, ಆ ಬಳಿಕ ಒಂದು ದಿನವನ್ನು ಹೆಚ್ಚುವರಿಯಾಗಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಸದ್ಯ ಇಂದು 32 ದಿನದ ನಿತ್ಯ ವಿಚಾರಣೆ ಆರಂಭವಾಗಿದೆ.

ನ್ಯಾ. ಗೊಗೊಯಿ, ಅಡ್ವೋಕೇಟ್ ರಾಜೀವ್ ಧವನ್ ಅವರಿಗೆ ವಾದ ಮಂಡನೆಗೆ ಎರಡು ದಿನಗಳ ಕಾಲಾವಕಾಶ ಸಾಕೇ? ಎನ್ನುವ ಪ್ರಶ್ನೆಗೆ ಎರಡು ದಿನವೂ ಅಗತ್ಯವಿಲ್ಲ, ಅದರೊಳಗಡೆ ತನ್ನ ವಾದ ಮುಗಿಯಲಿದೆ ಎಂದು ಉತ್ತರಿಸಿದ್ದಾರೆ.

ಅಕ್ಟೋಬರ್ 4ರಂದು ಬಹುತೇಕ ಎಲ್ಲ ವಾದ ಮುಕ್ತಾಯಕ್ಕೆ ಕೋರ್ಟ್​ ಸೂಚನೆ ನೀಡಿದ್ದು, ಆ ಬಳಿಕ ದಸರಾ ರಜೆಯಿಂದ ವಿಚಾರಣೆಗೆ ವಿರಾಮ ದೊರೆಯಲಿದೆ. ಅಕ್ಟೋಬರ್​ 14ರಂದು ಕೋರ್ಟ್​ ರಜೆಯ ಬಳಿಕ ಮತ್ತೆ ಅಯೋಧ್ಯೆ ವಿಚಾರಣೆ ಆರಂಭಿಸಲಿದ್ದು, 18ರಂದು ಕೊನೆಯ ದಿನದ ವಿಚಾರಣೆ ನಡೆಯಲಿದೆ. ಹೀಗಾಗಿ ಇನ್ನು ಕೇವಲ 10.5 ದಿನದಲ್ಲಿ ಎಲ್ಲ ವಾದ-ಪ್ರತಿವಾದ ಕೊನೆಗೊಳ್ಳಲಿದೆ. ವಿಚಾರಣೆ ಮುಕ್ತಾಯಕ್ಕೆ ಗಡುವು ವಿಧಿಸಿದ ವೇಳೆಯಲ್ಲೇ ನಿತ್ಯ ವಿಚಾರಣೆಗೆ ಇನ್ನು ಮುಂದೆ 1 ಗಂಟೆ ಹೆಚ್ಚುವರಿಯಾಗಿ ನಡೆಯಲಿದೆ. ಅಂದರೆ ನಾಲ್ಕು ಗಂಟೆಗೆ ಮುಕ್ತಾಯವಾಗುತ್ತಿದ್ದ ವಿಚಾರಣೆ ಐದು ಗಂಟೆಯವರೆಗೂ ನಡೆಯಲಿದೆ.

ಮಧ್ಯಸ್ಥಿಕೆ ವಿಫಲ:

ಅಯೋಧ್ಯೆ ವಿವಾದ ಸುಪ್ರೀಂಕೋರ್ಟ್​ನಲ್ಲಿ ಬಗೆಹರಿಸುವುದು ಅಸಾಧ್ಯ ಎಂದು ಪರಿಗಣಿಸಿ ಮಧ್ಯಸ್ಥಿಕೆ ತಂಡವನ್ನು ನೇಮಿಸಿ ಪ್ರಕರಣವನ್ನು ಆ ತಂಡಕ್ಕೆ ಹಸ್ತಾಂತರ ಮಾಡಿತ್ತು.

ಸುಪ್ರೀಂನ ಮಾಜಿ ನ್ಯಾಯಮೂರ್ತಿ ಎಫ್​.ಎಂ.ಈ. ಖಲೀಫುಲ್ಲಾ, ಧಾರ್ಮಿಕ ಗುರು ರವಿಶಂಕರ್ ಗುರೂಜಿ ಹಾಗೂ ಹಿರಿಯ ಕಾನೂನು ತಜ್ಞ ಶ್ರೀರಾಮ್ ಪಂಚು ಅವರನ್ನೊಳಗೊಂಡ ಮಧ್ಯಸ್ಥಿಕೆ ಸಮಿತಿ ಅಯೋಧ್ಯೆ ವಿವಾದಕ್ಕೆ ಕೊನೆಹಾಡಲು ಸರ್ವಪ್ರಯತ್ನ ಮಾಡಿತ್ತು.

ಮಧ್ಯಸ್ಥಿಕೆಯನ್ನು ಎಂಟು ವಾರದಲ್ಲಿ ಕೊನೆಗೊಳಿಸಿ ವರದಿ ಸಲ್ಲಿಸಲು ಸಮಿತಿಗೆ ಸುಪ್ರೀಂ ಸೂಚಿಸಿತ್ತು. ಆ ಬಳಿಕ ಮೇ ತಿಂಗಳಲ್ಲಿ ಈ ಮಧ್ಯಸ್ಥಿಕೆ ವಿಚಾರಣೆಯನ್ನು ಆಗಸ್ಟ್ 15ರವರೆಗೆ ಮೂಮದುವರಿಸಿ ಆದೇಶ ಹೊರಡಿಸಿತ್ತು.

ಆದರೆ 70 ವರ್ಷಗಳ ಸುದೀರ್ಘ ಇತಿಹಾಸದ ವಿವಾದಕ್ಕೆ ಮಧ್ಯಸ್ಥಿಕೆ ಸಮಿತಿ ತಾರ್ಕಿಕ ಅಂತ್ಯ ನೀಡಲು ವಿಫಲವಾಗಿದೆ ಎಂದು ವರದಿ ಸಲ್ಲಿಕೆ ಬಳಿಕನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು.

ನಿತ್ಯ ವಿಚಾರಣೆ:

ಮಧ್ಯಸ್ಥಿಕೆ ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಪ್ರಕರಣವನ್ನು ಕೈಗೆತ್ತಿಕೊಂಡ ಕೋರ್ಟ್ ಆಗಸ್ಟ್ ತಿಂಗಳಲ್ಲಿ ನಿತ್ಯ ವಿಚಾರಣೆ ಆರಂಭಿಸಿದ. ಹಿಂದೂ ಮಹಾಸಭಾ, ಸುನ್ನಿ ವಕ್ಫ್ ಬೋರ್ಡ್​ ಹಾಗೂ ನಿರ್ಮೋಹಿ ಅಖಾರ 2.77 ಎಕರೆ ವಿಸ್ತೀರ್ಣದ ಜಾಗಕ್ಕೆ ತಮ್ಮ ವಾದ ಮಂಡಿಸುತ್ತಿದ್ದಾರೆ. ಈಗಾಗಲೇ 31 ದಿನಗಳ ವಿಚಾರಣೆ ನಡೆಸಿರುವ ಕೋರ್ಟ್​ ಅಕ್ಟೋಬರ್ 18ರಂದು ವಿಚಾರಣೆ ಕೊನೆಗೊಳಿಸಲಿದೆ ಎಂದು ಈಗ ಹೇಳಿದ್ದು ಅಕ್ಟೋಬರ್ ತಿಂಗಳಲ್ಲೇ ಅಯೋಧ್ಯೆ ವಿವಾದ ಐತಿಹಾಸಿಕ ತೀರ್ಪು ಹೊರಬೀಳುವ ಸಾಧ್ಯತೆ ನಿಚ್ಚಳವಾಗಿದೆ. ಇನ್ನೊಂದೆಡೆ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕಾರ್ಯಾವಧಿ ನವೆಂಬರ್ 17ರಂದು ಮುಕ್ತಾಯವಾಗಲಿದೆ.

ABOUT THE AUTHOR

...view details