ನವದೆಹಲಿ: ಭಾರತದ ಉದ್ಯಮಿಗಳು ಹಾಗೂ ಉತ್ಪನ್ನಗಳ ತಯಾರಕರು ತಾವು ತಯಾರಿಸುವ ವಸ್ತುಗಳು ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿರುವಂತೆ ಪ್ರಯತ್ನಿಸಬೇಕು. ದೇಶೀಯವಾಗಿ ತಯಾರಿಸಿದ ವಸ್ತುಗಳಿಗೆ ದೇಶದಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ನಮ್ಮಲ್ಲಿ ತಯಾರಾಗುವ ವಸ್ತುಗಳು ಸಹ ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿರಲಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಯಮಿಗಳಿಗೆ ಕರೆ ನೀಡಿದ್ದಾರೆ.
ಇಂದು 72ನೇ ಸಂಚಿಕೆಯ ಮನ್ ಕಿ ಬಾತ್ ರೇಡಿಯೊ ಸಂವಾದದಲ್ಲಿ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು.
ಯಾವೆಲ್ಲ ವಿದೇಶಿ ಉತ್ಪನ್ನಗಳನ್ನು ನಾವು ದಿನನಿತ್ಯ ಬಳಸುತ್ತ ಆ ವಸ್ತುಗಳ ಮೂಲಕ ವಿದೇಶಿ ಶಕ್ತಿಗಳ ಹಿಡಿತಕ್ಕೆ ಸಿಲುಕುತ್ತಿದ್ದೇವೆ ಎಂಬುದರ ಬಗ್ಗೆ ಜನತೆ ಅರಿತುಕೊಳ್ಳಬೇಕು. ವಿದೇಶಿ ವಸ್ತುಗಳಿಗೆ ಪರ್ಯಾಯವಾಗಿ ದೇಶೀಯ ಉತ್ಪನ್ನಗಳನ್ನು ಗುರುತಿಸಿ ಬಳಸಲಾರಂಭಿಸಬೇಕು. ಆ ಮೂಲಕ ನಮ್ಮ ಜನರ ಶ್ರಮವನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮೋದಿ ಹೇಳಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಕಾರಣದಿಂದ ವಿಶ್ವಾದ್ಯಂತ ಸರಕು ಸಾಗಣೆ ಜಾಲದಲ್ಲಿ ವ್ಯತ್ಯಯಗಳುಂಟಾಗಿವೆ. ಆದರೆ ಅಂಥ ಪ್ರತಿ ಬಿಕ್ಕಟ್ಟಿನಿಂದಲೂ ನಾವು ಹೊಸ ಪಾಠ ಕಲಿಯುತ್ತಿದ್ದೇವೆ ಹಾಗೂ ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದೇವೆ. ಈ ಸಾಮರ್ಥ್ಯವೇ ದೇಶದ 'ಆತ್ಮ ನಿರ್ಭರತೆ' ಯಾಗಿದೆ ಎಂದು ಪ್ರಧಾನಿ ಕೊಂಡಾಡಿದರು.
ಗ್ರಾಹಕರು ಇಂದು ಸ್ಥಳೀಯವಾಗಿ ತಯಾರಾದ ಆಟಿಕೆಗಳನ್ನು ಕೊಳ್ಳಲು ಬಯಸುತ್ತಿದ್ದಾರೆ. ದೇಶದ ಜನರ ಆಲೋಚನಾ ವಿಧಾನದಲ್ಲಿ ಬಹುದೊಡ್ಡ ಬದಲಾವಣೆಯಾಗಿರುವುದನ್ನು ಇದು ಸೂಚಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.