ಕೌಶಂಬಿ (ಉತ್ತರ ಪ್ರದೇಶ ):ಭಾರತ ಇವತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ನಮ್ಮ ದೇಶದಲ್ಲಿ ಬಚ್ಚಲು ಮನೆಯಿಂದ ಬಾಹ್ಯಾಕಾಶದವರೆಗೆ ತಂತ್ರಜ್ಞಾನದ ಬೆಳವಣಿಗೆ ಆಗಿದೆ. ದೇಶದ ಜನರು ಕೂಡ ಆಧುನಿಕ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಾರೆ. ಇವೆಲ್ಲವೂ ಭವ್ಯ ಭಾರತದ ಒಂದು ಮುಖವಾದರೆ, ಇದೇ ದೇಶದ ಇನ್ನೊಂದು ಮುಖ ಇಂದಿಗೂ ಅತ್ಯಂತ ವಿಕಾರವಾಗಿ ಮತ್ತು ಅವ್ಯಸ್ಥೆಯಿಂದ ಕೂಡಿದೆ. ಇದಕ್ಕೆ ಆಗಾಗ ವರದಿಯಾಗುತ್ತಿರುವ ಕೆಲವೊಂದು ಅಮಾನವೀಯ ಘಟನೆಗಳೇ ಸಾಕ್ಷಿಯಾಗಿವೆ.
ಇದೀಗ ಉತ್ತರ ಪ್ರದೇಶದ ಕೌಶಂಬಿ ಬಳಿಯ ಗ್ರಾಮವೊಂದರಲ್ಲಿ ಇಂತಹದ್ದೇ ಒಂದು ಕರುಳು ಹಿಂಡುವ ಘಟನೆ ಬೆಳಕಿಗೆ ಬಂದಿದೆ. ಆರ್ಥಿಕವಾಗಿ ಹಿಂದುಳಿದ ರೈತನೊಬ್ಬ ಆಹಾರ ಕೇಳಿದ ತನ್ನ ಮಗನನ್ನು ಸರಪಳಿಯಿಂದ ಮರಕ್ಕೆ ಕಟ್ಟಿ ಹಾಕಿದ್ದಾನೆ. ಕೌಶಂಬಿ ಜಿಲ್ಲೆಯ ಸೈಟರ್ ಕೊಟ್ಟಾಲಿ ಪ್ರದೇಶದ ಬಳಿ ಈ ಘಟನೆ ಬೆಳಕಿಗೆ ಬಂದಿದೆ.
ಆಹಾರ ಕೇಳಿದ ಮಗನನ್ನು ಸರಪಳಿಯಿಂದ ಮರಕ್ಕೆ ಕಟ್ಟಿ ಹಾಕಿದ ರೈತ! ಕಡು ಬಡತನದಿಂದ ಕೂಡಿರುವ, ಇರಲು ಸರಿಯಾದ ಮನೆಯೂ ಇಲ್ಲದ ರೈತ ಕುಟುಂಬ ಸಂಕಷ್ಟದ ಜೀವನ ಸಾಗಿಸುತ್ತಿದೆ. ಮನೆಯಲ್ಲಿ ಬೇಕಾದಷ್ಟು ತಿನ್ನಲು ಆಹಾರವಿಲ್ಲ. ರೈತ ಕಂಧೈ ಲಾಲ್ನ ಮಗ ವಿಕಾಸ್, ಆಹಾರಕ್ಕಾಗಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದನಂತೆ. ಅಲ್ಲದೆ, ಕಷ್ಟುಪಟ್ಟು ತಯಾರಿಸಿಟ್ಟ ಅಲ್ಪಸ್ವಲ್ಪ ಆಹಾರವನ್ನು ಆಗಾಗ ಬಂದು ತಿನ್ನುತಿದ್ದನಂತೆ. ಹೀಗಾಗಿ ಬೇರೆ ದಾರಿ ಕಾಣದೆ ವಯಸ್ಸಿಗೆ ಬಂದ ಮಗನನ್ನ ಬಡ ತಂದೆ ಸರಪಳಿಯಿಂದ ಮರಕ್ಕೆ ಕಟ್ಟಿ ಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಾಮ್‌ವೀರ್ ಸಿಂಗ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರತಿಕ್ರಿಯಿಸಲು ಜಿಲ್ಲಾಧಿಕಾರಿ ನಿರಾಕರಿಸಿದ್ದಾರೆ.
ಈ ಘಟನೆಯಲ್ಲಿ ಮಗನನ್ನು ಅಮಾನವೀಯವಾಗಿ ಮರಕ್ಕೆ ಕಟ್ಟಿ ಹಾಕಿದ ಬಡ ರೈತನ ತಪ್ಪೋ ಅಥವಾ ಮನೆಯಲ್ಲಿ ಆಹಾರಕ್ಕಾಗಿ ಗಲಾಟೆ ಮಾಡಿದ ಮಗನ ತಪ್ಪೋ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಆದರೆ, ಸರ್ಕಾರಗಳು ಯಾವುದೇ ಬಂದರೂ ರೈತರ ಪರಿಸ್ಥಿತಿ ಇಂದಿಗೂ ಸುಧಾರಿಸಿಲ್ಲ ಎಂದು ಹೇಳಬಹುದು. ಊರಿಗೆಲ್ಲಾ ಅನ್ನ ಕೊಡುವ ರೈತನ ಮನೆಯಲ್ಲಿ ಮಾತ್ರ ತಿನ್ನಲು ಅನ್ನವಿಲ್ಲದಿರುವುದು ವಿಪರ್ಯಾಸದ ಸಂಗತಿಯೇ ಸರಿ.